ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಕಂಪೆನಿ ಇಲ್ಲಿನ ಸಂಗಮ್ ಜಂಕ್ಷನ್‌ನಲ್ಲಿ ಅರೆಬರೆ ಕಾಮಗಾರಿ ನಡೆಸಿದ್ದರಿಂದ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪರಿಶೀಲನೆ ನಡೆಸಿ ಗುತ್ತಿಗೆ ಕಂಪೆನಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮಳೆಗಾಲಕ್ಕೆ ಯಾವುದೇ ತಯಾರಿ ಮಾಡಿಕೊಳ್ಳದೆ ಅರೆಬರೆ ಹೆದ್ದಾರಿ ಕಾಮಗಾರಿ ನಡೆಸಲಾಗಿದ್ದು ಮತ್ತು ಸೂಕ್ತ ಚರಂಡಿ ವ್ಯವಸ್ಥೆ ಮಾಡದೆ ಇರುವುದರಿಂದ ಸ್ಥಳೀಯ ಕುಟುಂಬಗಳಿಗೆ ತೊಂದರೆಗಳಾಗುವ ಸಾಧ್ಯತೆ ಇರುವುದುರಿಂದ ಸ್ಥಳೀಯ ನಿವಾಸಿಗಳ ಮನವಿ ಮೇರೆಗೆ ಆಗಮಿಸಿದ ಸಂಸದೆ ಶೋಭಾ ಕರಂದ್ಲಾಜೆ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಐಆರ್‌ಬಿ ಕಂಪೆನಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸ್ಥಳದಲ್ಲೇ ಐಆರ್‌ಬಿ ಇಂಜಿನಿಯರ್ ಯೋಗೇಂದ್ರಪ್ಪ ಅವರಿಗೆ ಕರೆ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ ತೀವ್ರ ತರಾಟೆಗೆ ತೆಗೆದುಕೊಂಡರು. ಮಳೆಗಾಲ ಆರಂಭವಾಗುತ್ತಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಮಾಡಿಕೊಳ್ಳದೆ ರಸ್ತೆಗೆ ಸುರಿದ ಮಣ್ಣುಗಳೆಲ್ಲಾ ಕೃಷಿ ಭೂಮಿಗೆ ನುಗ್ಗುತ್ತದೆ. ನಿಮ್ಮ ಬೇಜವಾಬ್ದಾರಿಯಿಂದ ಕೃಷಿಕರು ನಷ್ಟ ಅನುಭವಿಸಬೇಕಾಗುತ್ತದೆ. ಕೂಡಲೇ ಸಮಸ್ಯೆ ಇತ್ಯರ್ಥಪಡಿಸಿ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕು ಎಂದರು. ಈ ವೇಳೆಯಲ್ಲಿ ಸ್ಥಳೀಯ ನಿವಾಸಿಗಳ ಬೇಡಿಕೆಯನ್ನು ಸಂಸದೆ ಶೋಭಾ ಕರಂದ್ಲಾಜೆ ಆಲಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಭಾಸ್ಕರ ಬಿಲ್ಲವ, ಸುನೀಲ್ ಹೇರಿಕುದ್ರು, ರಾಜೇಂದ್ರ ಸಂಗಮ್, ಪುರಸಭಾ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.












