ನಾನು ಮಾಡಿದಷ್ಟು ಅಭಿವೃದ್ದಿ ಯಾವ ಗಂಡಸು ಮಾಡಿಲ್ಲ: ಸಂಸದೆ ಶೋಭಾ

ಕುಂದಾಪುರ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಯಾವ ಗಂಡಸು ಮಾಡದ ಅಭಿವೃದ್ದಿ ಕೆಲಸಗಳನ್ನು ನಾನು ಮಾಡಿದ್ದೇನೆ. ಸಂಸದೆಯಾಗಿ ಕ್ಷೇತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ. ಹೆಣ್ಣು ಮಕ್ಕಳು ಕೆಲಸವನ್ನು ನಿಯತ್ತು, ಪ್ರಾಮಾಣಿಕವಾಗಿ ಮಾಡುತ್ತಾರೆ. ಈ ಬಾರಿ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ನಾನು ಹೆದರಲ್ಲ, ದೃತಿಗೆಡಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಪರೋಕ್ಷವಾಗಿ ಜಯಪ್ರಕಾಶ್ ಹೆಗ್ಡೆ ಕಾಲೆಳೆದಿದ್ದಾರೆ.

ಕೋಟದಲ್ಲಿ ನಡೆದ ಜಿಲ್ಲಾಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷ ಇದೇ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಲು ಸೂಚಿಸಿದಲ್ಲಿ ನನ್ನ ಸ್ಪರ್ಧೆ ಖಚಿತ. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ಚುನಾವಣೆ ನಿರ್ವಹಣೆ ಜವಬ್ದಾರಿಯನ್ನು ವಹಿಸಿಕೊಂಡು ರಾತ್ರಿ ಹಗಲು ಎನ್ನದೇ ಕೆಲಸ ಮಾಡಿರುವೆ. ಮುಂದೆಯೂ ಕೂಡ ಪಕ್ಷ ನೀಡಿದ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ. ಟಿಕೆಟ್ ನೀಡುವ ವಿಚಾರ ಪಕ್ಷದ ವರಿಷ್ಠರ ಜವಬ್ದಾರಿಯಾಗಿದ್ದು ಪಕ್ಷದ ಸೇವೆ, ಪ್ರವಾಸ ಹಾಗೂ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದ ಮಾನದಂಡಗಳನ್ನು ಆಧಾರವಾಗಿಸಿಕೊಂಡು ಬಿಜೆಪಿಯಲ್ಲಿ ಟಿಕೆಟ್ ನೀಡಲಾಗುತ್ತದೆ. ಯಾರೇ ಗೋ ಬ್ಯಾಕ್ ಅನ್ನಲಿ ಇದರಿಂದ ಪಕ್ಷಕ್ಕೆ ಹಾನಿಯೇ ಹೊರತು ಲಾಭವಿಲ್ಲ. ಪಕ್ಷಕ್ಕೆ ಹಾನಿ ಮಾಡಲು ಮುಂದಾದ ಹದಿನೈದು ಜನರ ತಂಡ ಇಂತಹ ಅಪಪ್ರಚಾರ ಮಾಡುತ್ತಿದ್ದು ಅಂತಹ ಖಾತೆಗಳನ್ನು ಹಿರಿಯರು ಗಮನಿಸುತ್ತಿದ್ದಾರೆ ಎಂದರು.

ಕೇಂದ್ರ ಮಂತ್ರಿಗಳ ಜೊತೆ ಜಗಳ ಮಾಡಿ ಅಭಿವೃದ್ದಿ ಮಾಡಿರುವೆ:

ನಾನು ಯಾರಿಗೂ ಮತ್ತು ಯಾವುದಕ್ಕೂ ಸ್ಪರ್ಧಿಯಲ್ಲ. ಪಕ್ಷ ಕೊಟ್ಟ ಕೆಲಸ ಮಾಡುವುದು ನನ್ನ ಕೆಲಸ. ಉಡುಪಿ-ಚಿಕ್ಕಮಗಳೂರು ಹೋಗಿ ಸ್ಪರ್ಧಿಸಿ, ಗೆದ್ದು ಅಭಿವೃದ್ದಿ ಮಾಡಬೇಕೆಂಬ ಆದೇಶದ ಹಿನ್ನಲೆ ಕೆಲಸ ಮಾಡುತ್ತಿರುವೆ. ಕ್ಷೇತ್ರಕ್ಕೆ ಕೇಂದ್ರ ಸರಕಾರದಿಂದ ತರಬೇಕಾದ ಕೆಲಸಗಳನ್ನು ಕೇಂದ್ರ ಮಂತ್ರಿಗಳ ಜೊತೆ ಜಗಳ ಮಾಡಿ ತಂದಿದ್ದು ನನಗೆ ನನ್ನ ಕೆಲಸದ ಬಗ್ಗೆ ಸಮಾಧಾನವಿದೆ, ಇನ್ನಷ್ಟು ಕೆಲಸ ಮಾಡುವ ತುಡಿತವೂ ಇದೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಬರೆದ ಯುವಕನ ವಿರುದ್ಧ ದೂರು ದಾಖಲಾದ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಯಾರ ವಿರೋಧಿಯೂ ಅಲ್ಲ ಎಂದರು.

ಓರ್ವ ಹೆಣ್ಣಾಗಿ ನಾಲ್ಕೂವರೆ-ಐದು ವರ್ಷದ ಅವಧಿಯಲ್ಲಿ ಕೇಂದ್ರ ವಿದ್ಯಾಲಯಗಳನ್ನು ಎರಡು ಜಿಲ್ಲೆಗೆ ತಂದಿರುವೆ, ಪಾಸ್‌ಪೋರ್ಟ್ ಕಚೇರಿ, ಜಿಟಿಟಿಸಿ ಸೆಂಟರ್, ಕೌಶಲ್ಯಾಭಿವೃದ್ದಿ ಇಲಾಖೆಯ ಸೆಂಟರ್, ಇಡೀ ರಾಜ್ಯದಲಿ ಎಲ್ಲಿಯೂ ಇಲ್ಲದ ಸಖಿ ಸೆಂಟರ್ ಅನ್ನು ಜಿಲ್ಲೆಗೆ ತಂದಿರುವೆ. ಈ ಹಿಂದೆ ಸಂಸದರಾದ ಯಾವ ಗಂಡಸೂ ಮಾಡದಷ್ಟು ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ  ಎಂದರು.