ಶಿವಪಾಡಿ: ಇಲ್ಲಿನ ಶ್ರೀ ಉಮಾಮಹೇಶ್ವರ ದೇಗುಲ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿ ಆಶ್ರಯದಲ್ಲಿ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಕೈಗೊಳ್ಳಲಾದ ಅತಿರುದ್ರ ಮಹಾಯಾಗವು ಮಾ.5 ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಇದೇ ಮೊದಲ ಬಾರಿಗೆ ವಾರಣಾಸಿಯ ಗಂಗಾರತಿ ಮಾದರಿಯಲ್ಲಿ ಶಿವಾರತಿ ನಡೆಯಲಿದೆ.
ಮಾ.2 ರಿಂದ 4ರವೆರೆಗೆ ವಾರಣಾಸಿಯಿಂದ ಆಗಮಿಸಿದ 8 ಮಂದಿಯ ತಂಡದಿಂದ ಶಿವಾರತಿಯು ಅತಿರುದ್ರಯಾಗ ಮಂಟಪದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿದೆ. ಮಾ.2 ರಂದು ಶತ ಚಂಡಿಕಾಯಾಗ ನಡೆಯಲಿದೆ. ಮಧ್ಯಾಹ್ನ 3ಗಂಟೆಗೆ ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆಯು ಹೊರಡಲಿದ್ದು ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಶಿವಪಾಡಿ ದೇವಸ್ಥಾನವನ್ನು ತಲುಪಲಿದೆ. ಮೆರವಣಿಗೆಯಲ್ಲಿ ಮಹಿಳೆಯರಿಂದ ಕಲಶ, ಚಂಡೆ ವಾದನ ,ಭಜನಾ ತಂಡಗಳು, ವಿವಿಧ ವೇಷಭೂಷಣಗಳು, ಸ್ತಬ್ದಚಿತ್ರಗಳು,ಕೀಲು ಕುದುರೆ, ಬ್ಯಾಂಡ್ ವಾದ್ಯ ಸಹಿತ ಇನ್ನಿತರ ಆಕರ್ಷಣೆಗಳಿರಲಿವೆ
ಮಾ. 4ರಂದು ಸಂಜೆ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರನ್ನು ವಿಶೇಷ ಮೆರವಣಿಗೆಯಲ್ಲಿ ಕರೆತರಲಾಗುವುದು. ಸಂಜೆ 5.30ಕ್ಕೆ ಸ್ವಾಮೀಜಿಯವರು ಅನುಗ್ರಹ ಭಾಷಣ ಮಾಡಲಿದ್ದು, ಬಳಿಕ ಸ್ವಾಮೀಜಿಯವರಿಂದ ಶ್ರೀಚಂದ್ರಮೌಳೀಶ್ವರ ಸ್ವಾಮಿಗೆ ಪೂಜೆ ನೆರವೇರಲಿದೆ.
ಮಾ. 5ರಂದು ಬೆಳಗ್ಗೆ 6.30 ರಿಂದ ಏಕಾದಶಿ ಕುಂಡಗಳಲ್ಲಿ ಅತಿರುದ್ರ ಮಹಾಯಾಗ, 11.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ ಸ್ವಾಮೀಜಿಯವರಿಂದ ದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಲಿದೆ.