ಭೀಕರ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಕಳದ ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್ ನಿಧನ

ಕಾರ್ಕಳ: ನಗರದ ಶಿವತಿಕೆರೆ ಸಮೀಪ ಸಂಭವಿಸಿದ್ದ ಭೀಕರ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಕಳ ತಾಲೂಕು ಕಚೇರಿಯ ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್ ನಂದಳಿಕೆ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಕಳೆದ ರವಿವಾರ ಸಂಜೆ ಸುಮಾರು 7.30ರ ವೇಳೆಗೆ ಕಾರ್ಕಳದಿಂದ ನಂದಳಿಕೆಯಲ್ಲಿರುವ ತಮ್ಮ ಮನೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ, ಶಿವತಿಕೆರೆ ಸಮೀಪದ ಪೆಟ್ರೋಲ್ ಬಂಕ್ ಬಳಿ ಇಂಡಿಕೇಟರ್ ನೀಡಿ ಯೂ-ಟರ್ನ್ ಪಡೆಯಲು ಮುಂದಾಗಿದ್ದರು. ಇದೇ ವೇಳೆ ಹಿಂದಿನಿಂದ ಅತಿ ವೇಗವಾಗಿ ಬಂದ ಬೈಕ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಾಯಗಳ ತೀವ್ರತೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ .ಇವರು ಪ್ರಾಮಾಣಿಕ ಅಧಿಕಾರಿಯಾಗಿ, ಜನಾನುರಾಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶಿವಪ್ರಸಾದ್ ರಾವ್ ಅವರ ನಿಧನಕ್ಕೆ ತಾಲೂಕು ಕಚೇರಿ ಸಿಬ್ಬಂದಿ, ಸಹೋದ್ಯೋಗಿಗಳು ಹಾಗೂ ಸ್ಥಳೀಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.