ಉಡುಪಿ: ಛತ್ರಪತಿ ಶಿವಾಜಿ ಕುಟುಂಬಸ್ಥರು ಕರ್ನಾಟಕ ಮೂಲದವರು. ಶಿವಾಜಿಯ ಪೂರ್ವಜರು ಕರ್ನಾಟಕದ ಗದಗ ಜಿಲ್ಲೆಯಲ್ಲಿದ್ದರು. ಇದನ್ನು ತಿಳಿದುಕೊಳ್ಳುವ ಬದಲು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವಿವೇಕಿತನದ ಹೇಳಿಕೆ ನೀಡುತ್ತಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದರು.
ಇಂದು ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದ ಉದ್ಘಾಟನೆಗೆ ಉಡುಪಿಗೆ ಆಗಮಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸಿವೆ. ಅದರ ಪರಿಸ್ಥಿತಿ ಈಗ ಮನೆಯೊಂದು ಮೂರು ಬಾಗಿಲು ಎಂಬಂತೆ ಆಗಿದೆ. ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆದಂತಿದೆ ಮಹಾರಾಷ್ಟ್ರದ ಪರಿಸ್ಥಿತಿ ಇದೆ. ಸರ್ಕಾರದಲ್ಲಿ ಸ್ಥಿರತೆಯಿಲ್ಲ, ಹಾಗಾಗಿ ಜನತೆಯ ಗಮನ ಬೇರೆಡೆಗೆ ಸೆಳೆಯಲು ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಕೋವಿಡ್ ನಿರ್ವಹಣೆಯಲ್ಲಿ ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನಪರವಾದ ಯಾವುದೇ ಕಾರ್ಯಕ್ರಮ ನಡೆಸುತ್ತಿಲ್ಲ. ಹಾಗಾಗಿ ಜನರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಆದ್ದರಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಎಂದರು.
ಬೆಳಗಾವಿ, ನಿಪ್ಪಾಣಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯೆಂದು ಘೋಷಣೆ ಮಾಡಲಾಗಿದೆ. ಈಗಾಗಲೇ ಅಲ್ಲಿ ಸುವರ್ಣ ಸೌಧವನ್ನು ಕೂಡ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಖಾನಾಪುರದ ಎಂಇಎಸ್ ಮಾಜಿ ಶಾಸಕ ಅರವಿಂದ್ ಪಾಟೀಲ್ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಮುಖಂಡ ವಿರೋಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,
ಅರವಿಂದ್ ಪಾಟೀಕ್ ಬಿಜೆಪಿಗೆ ಬರುತ್ತೇನೆಂದು ನನ್ನ ಬಳಿ ಚರ್ಚಿಸಿದ್ದಾರೆ. ಬರುವುದಾದರೆ ಬನ್ನಿ ಎಂದು ಹೇಳಿದ್ದೇನೆ. ಅವರನ್ನು ಅಭ್ಯರ್ಥಿ ಮಾಡುವ ವಿಚಾರವನ್ನು ಪಕ್ಷದ ವರಿಷ್ಠರು ಮಾಡುತ್ತಾರೆ. ಪಕ್ಷಕ್ಕೆ ಬರುವವರನ್ನು ವಿರೋಧ ಮಾಡುವುದು ಸರಿಯಲ್ಲ. ಬೇರೆ ಪಕ್ಷದ ಅಭ್ಯರ್ಥಿ, ಮುಖಂಡರು ಪಕ್ಷಕ್ಕೆ ಬಂದಾಗ ಪಕ್ಷ ಸಂಘಟನೆಗೆ ಅನುಕೂಲ ಆಗುತ್ತದೆ. ಪಕ್ಷವನ್ನು ಇನ್ನಷ್ಟು ಶಕ್ತಿಯುತವಾಗಿ ಸಂಘಟಿಸಬಹುದು ಎಂದರು.