ಶಿಶುಮರಣ ಹೆಚ್ಚಳ: ಸಮಗ್ರ ವರದಿಗೆ ಡಿಸಿ ಸೂಚನೆ

ಉಡುಪಿ, ಮೇ 29: ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ,  ಶಿಶು ಮರಣಕ್ಕೆ ಸಂಬಂಧಿಸಿ ಯಾವ ಪ್ರದೇಶದಲ್ಲಿ ಹಾಗೂ ಯಾವ ಕಾರಣಕ್ಕೆ ಶಿಶುಮರಣ ಹೆಚ್ಚಾಗಿದೆ ಎಂಬುದರ ಬಗ್ಗೆ ಸಮಗ್ರ ವರದಿ ನೀಡಲು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಘಟಕಗಳ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ 2019ರ ಏಪ್ರಿಲ್ ತಿಂಗಳೊಂದರಲ್ಲೇ ಒಂದು ತಿಂಗಳ 7 ಶಿಶುಗಳು ವಿವಿಧ ಆರೋಗ್ಯ ಕಾರಣಗಳಿಂದ ಸಾವನ್ನಪ್ಪಿದ್ದು, ಈ ಪೈಕಿ 4 ಹೆಣ್ಣು ಶಿಶುಗಳು ಕೂಡಾ ಇರುವುದು ಗಂಭೀರವಾಗಿದೆ.  ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶಿಶು ಜನನ ಪ್ರಮಾಣ ಹೆಚ್ಚಾಗಿದೆ. 14760 ಇದ್ದ ಜನನ ಪ್ರಮಾಣ ಈ ಭಾರಿ ಮಾರ್ಚ್ 2018 ರಿಂದ ಎಪ್ರೀಲ್ 2019ರ ವರೆಗೆ 14,775 ಆಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ ಶಿಶುಮರಣದ ಪ್ರತಿಯೊಂದು ಪ್ರಕರಣವನ್ನೂ ಕೂಲಂಕುಷ ಪರಿಶೀಲನೆಗೊಳಪಡಿಸಿ ಸಮಗ್ರವಾದ ವಿವರ ನೀಡಲು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಕಳೆದ ಡಿಸೆಂಬರ್‍ನಿಂದ ಇಲ್ಲಿಯವರೆಗೆ 7 ಮಹಿಳೆಯರು ಪ್ರಸವ ಸಂಬಂಧಿ ಕಾರಣಗಳಿಂದ  ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹೆರಿಗೆ ಸಂದರ್ಭದಲ್ಲಿ ಎಲ್ಲಾ ತುರ್ತು ಸೌಲಭ್ಯಗಳು ಇರುವಂತೆ ಗಮನಹರಿಸಲು ಅವರು ಸೂಚಿಸಿದರು.

ಮುಂಜಾಗೃತಾ ಕ್ರಮ:

ಜಿಲ್ಲೆಯಲ್ಲಿ ಮಲೇರಿಯಾ ಡೆಂಗ್ಯೂ ಪ್ರಕರಣಗಳ ಬಗ್ಗೆ ಮುಂಜಾಗೃತಾ ಕ್ರಮಕೈಗೊಳ್ಳುವ ಸಲುವಾಗಿ ಆಶಾ ಕಾರ್ಯಕರ್ತೆಯರು ತಿಂಗಳಿಗೊಮ್ಮೆ ಮನೆ ಮನೆಗೆ ಭೇಟಿ ನೀಡಿ ಮನೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಯ್ದು ಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕು. ಶಿಕ್ಷಣ ಇಲಾಖೆ ವತಿಯಿಂದ ಕೂಡಾ ವಿದ್ಯಾರ್ಥಿಗಳಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಅದರ ಜೊತೆಗೆ ಶಾಲೆಗಳಲ್ಲಿ ಮಕ್ಕಳಿಗೆ ಲಾರ್ವ ಪತ್ತೆ ಹಚ್ಚುವಿಕೆ ಬಗ್ಗೆ ಆರೋಗ್ಯ ಇಲಾಖೆ ವತಿಯಿಂದ ನೀಡಲಾಗುವ ಮಾಹಿತಿಯನ್ನು ಮಕ್ಕಳು ಪಡೆದು ತಮ್ಮ ಮನೆಗಳಲ್ಲಿ ವಾರಕ್ಕೊಂದು ಬಾರಿ ಕಾರ್ಯಗತಗೊಳಿಸಿ ಈ ಬಗ್ಗೆ ಮಾಹಿತಿ ನೀಡಲು ಹೆಪ್ಸಿಬಾ ರಾಣಿ ಸೂಚಿಸಿದರು.

ರಾಜ್ಯದಲ್ಲಿ ಮಲೇರಿಯಾ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ 2 ನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಸಾಂಕ್ರಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಜೂನ್‍ನಿಂದ ಅಕ್ಟೋಬರ್‍ವರೆಗೆ 60 ಸಬ್ ಸೆಂಟರ್‍ಗಳಲ್ಲಿ ಲಾರ್ವ ಸರ್ವೆಯನ್ನು ಕೈಗೆತ್ತಿಕೊಳ್ಳಲು ಅನುದಾನ ಬಿಡುಗಡೆಯಾಗಿದೆ. ಜೂನ್ ತಿಂಗಳಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆಯನ್ನು ಆಚರಿಸುತ್ತಿದ್ದು, ಈ ಅವಧಿಯಲ್ಲಿ ಜಾಥ ಹಾಗೂ ಇತರ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಎಚ್1ಎನ್1 ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 306 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 9 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಹಾಗೂ ಜಿಲ್ಲೆಯಲ್ಲಿ ಪ್ರಸಕ್ತ ಋತುವಿನಲ್ಲಿ 14 ಮಂಗನ ಕಾಯಿಲೆ  ಪ್ರಕರಣಗಳು ಪತ್ತೆಯಾಗಿವೆ. ಸ್ವಚ್ಚ ಭಾರತ್ ಅಭಿಯಾನದ ಅಡಿಯಲ್ಲಿ ಮಳೆಗಾಲದಲ್ಲಿ ಪ್ರತೀ ವಾರ ಗ್ರಾಮೀಣ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಕಟ್ಟಡ ನಿರ್ಮಾಣ ಹಾಗೂ ರಸ್ತೆ ಕಾಮಗಾರಿ ಹಾಗೂ ನೀರು ನಿಂತು ಸೊಳ್ಳೆ ಉತ್ಪತ್ತಿ ಆಗುವಂತಹ ವಿವಿಧ ಕಾಮಗಾರಿಗಳನ್ನು ನಡೆಸವವರು ಆರೋಗ್ಯ ಇಲಾಖೆಯಿಂದ ಎನ್‍ಓಸಿಯನ್ನು ಪಡೆದುಕೊಳ್ಳಬೇಕು.

ಸ್ಚಚ್ಚತೆ ಕಾರ್ಯಕ್ರಮ:

ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಾರಕ್ಕೊಂದು ಬಾರಿ ವಾಟರ್ ಟ್ಯಾಂಕ್ ಸ್ಚಚ್ಚತೆ ಮತ್ತು ಅಂಗನವಾಡಿ ಹಾಗೂ ಶಾಲೆಗಳಲ್ಲಿ ಹ್ಯಾಂಡ್ ವಾಶ್ ಕಾರ್ಯಕ್ರಮ ನಡೆಸಬೇಕು. ವಾಶ್ ಕಾರ್ಯಕ್ರಮದ ಪ್ರಕಾರ ಈ ಎಲ್ಲಾ ಕಾರ್ಯಕ್ರಮವನ್ನು ಕ್ರಿಯಾತ್ಮಕವಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಎಂಡೋಸಲ್ಫಾನ್:

ಬೈಂದೂರು ಕುಂದಾಪುರ ವಿಭಾಗದಲ್ಲಿ 25 ಶೇ.ಕ್ಕಿಂತ ಹೆಚ್ಚು ಅಂಗವಿಕಲತೆಯುಳ್ಳ 13 ಮಂದಿ ಹಾಗೂ 25 ಶೇ. ಕ್ಕಿಂತ ಕಡಿಮೆ ಅಂಗವಿಕಲತೆಯುಳ್ಳ ಎಂಡೋಸಲ್ಫಾನ್ ಪೀಡಿತ ವಿಕಲಚೇತನರಿಗೆ ನೀಡುವ ಗುರುತಿನ ಚೀಟಿ ವಿತರಣೆ ವಿಳಂಬ ಹಾಗೂ ಎಂಡೋಸಲ್ಫಾನ್ ಪೀಡಿತ ವಿಕಲಚೇತನರಿಗೆ ಮತ್ತು ಹಾಸಿಗೆ ಹಿಡಿದವರಿಗೆ ಸಾಧನಾ ಸಲಕರಣೆಗಳನ್ನು ವಿತರಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಶೀಘ್ರವಾಗಿ 2 ದಿನಗಳೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

ಸಭೆಯಲ್ಲಿ ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜು,  ಮಹಿಳಾ ಮತ್ತು ಮಕ್ಕಳ ಅಭಿವೃದ್ಥಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವೀಸ್, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಪ್ರಶಾಂತ್ ಭಟ್, ಡಾ. ಎಂ.ಜಿ. ರಾಮ, ಡಾ.ರಾಮರಾವ್ ಮತ್ತಿತರರು ಉಪಸ್ಥಿತರಿದ್ದರು.