ಶಿರ್ವಾ: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಬೊಲೆರೋ ಪಿಕ್ ಅಪ್ ವಾಹನವೊಂದನ್ನು ಪೊಲೀಸರು ಹಿಡಿದು ಒಂದು ದನ ಹಾಗೂ ಎರಡು ಕರುಗಳನ್ನು ರಕ್ಷಣೆ ಮಾಡಿದ ಘಟನೆ ಶಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕಳತ್ತೂರು ಗ್ರಾಮದ ಚಂದ್ರನಗರ ಮಸೀದಿ ಬಳಿ ಶನಿವಾರ ರಾತ್ರಿ ನಡೆದಿದೆ.
ಕಳತ್ತೂರು ಗ್ರಾಮದ ಜನತಾ ಕಾಲನಿ ಎಂಬಲ್ಲಿ ದನಗಳನ್ನು ಕಳ್ಳತನ ಮಾಡಿ ಬೊಲೆರೋ ಪಿಕ್‌ಅಪ್ ವಾಹನದಲ್ಲಿ ಸಾಗಿಸುತ್ತಿದ್ದಾರೆ ಎಂಬ ಮಾಹಿತಿಯಂತೆ ಶಿರ್ವಾ ಪೊಲೀಸ್ ಠಾಣಾ ಉಪನಿರೀಕ್ಷಕ ಶ್ರೀಶೈಲ್ ಡಿ.ಎಂ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ, ಪೊಲೀಸರು ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ವಾಹನವನ್ನು ಬೆನ್ನಟ್ಟಿಕೊಂಡು ಹೋಗಿದ್ದು, ಪೊಲೀಸರು ಹಿಂಬಾಲಿಸುತ್ತಿರುವುದನ್ನು ಗಮನಿಸಿದ ಆರೋಪಿಗಳು ಕಳತ್ತೂರು ಚಂದ್ರನಗರದ ಮಸೀದಿ ಬಳಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸರು ವಾಹನದ ಬಳಿಗೆ ತೆರಳಿ ಪರಿಶೀಲಿಸಿದ್ದಾರೆ. ಆಗ ವಾಹನದ ಹಿಂಭಾಗದಲ್ಲಿ ಒಂದು ದನ ಹಾಗೂ ಎರಡು ಕರುಗಳಿದ್ದವು. ಅವುಗಳನ್ನು ಹಗ್ಗದಿಂದ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿರುವುದು ಕಂಡು ಬಂದಿದೆ. ಪರಾರಿಯಾದ ಆರೋಪಿಗಳನ್ನು ಮೊಯ್ಜಿನ್, ಕಬೀರ್ ಹಾಗೂ ಸಿದ್ದಿಕ್ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.