ಶಿರ್ವಾ: ಕುಡಿಯಲು ನೀರು ಕೇಳುವ ನೆಪ ಮಾಡಿಕೊಂಡು ಮನೆಗೆ ಬಂದ ಸುಲಿಗೆಕೋರನೊಬ್ಬ ವೃದ್ಧೆಯ ಕುತ್ತಿಗೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಸರವನ್ನು ಕದ್ದು ಪರಾರಿ ಆದ ಘಟನೆ ಕಾಪು ತಾಲ್ಲೂಕಿನ ಶಿರ್ವಾ ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಮೀಪ ನಡೆದಿದೆ.
ಬಂಟಕಲ್ಲು ನಿವಾಸಿ ವಸಂತಿ (72) ಚಿನ್ನದ ಸರ ಕಳೆದುಕೊಂಡ ವೃದ್ಧೆ. ಇವರ ಮನೆಗೆ ಶನಿವಾರ ಸಂಜೆ 6.20ರ ವೇಳೆಗೆ ಬೈಕ್ ನಲ್ಲಿ ಬಂದ ಅಪರಿಚಿತನೊಬ್ಬ ಕುಡಿಯಲು ನೀರು ಕೇಳಿದ್ದಾನೆ. ನೀರು ಕುಡಿದ ಬಳಿಕ ವಸಂತಿ ಅವರ ಹಿಂದಿನಿಂದ ಮನೆಯೊಳಗೆ ಬಂದಿದ್ದು, ಅವರ ಕುತ್ತಿಗೆಯಲ್ಲಿದ್ದ 36 ಗ್ರಾಂ ತೂಕದ 1.60 ಲಕ್ಷ ಮೌಲ್ಯದ ಚಿನ್ನದ ಮುಷ್ಠಿ ಸರವನ್ನು ಬಲತ್ಕಾರವಾಗಿ ಎಳೆದುಕೊಂಡು ತಾನು ಬಂದಿದ್ದ ಬೈಕ್ ನಲ್ಲಿ ಶಿರ್ವಾದ ಕಡೆಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆತ ನೀಲಿ ಬಣ್ಣದ ಗೆರೆಗಳಿರುವ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿಕೊಂಡು ಬಂದಿದ್ದನು ಎಂದು ವಸಂತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶಿರ್ವಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಲಿಗೆಕೋರನ ಪತ್ತೆಗಾಗಿ ಬಲೆ ಬೀಸಿದ್ದಾರೆ.