ಶಿರ್ವ: ಇಲ್ಲಿನ ನಡಿಬೆಟ್ಟು ಅಣೆಕಟ್ಟು ಬಳಿ ಮೀನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಜಾರಿಬಿದ್ದು ನೀರು ಪಾಲಾದ ದೈವ ನರ್ತಕ, ಶಿರ್ವ ಮಟ್ಟಾರು ನಿವಾಸಿ ದಿಲೀಪ್ (30) ಅವರ ಶವ ಸೋಮವಾರ ಮಧ್ಯಾಹ್ನ ಅಣೆಕಟ್ಟು ಬಳಿ ಪತ್ತೆಯಾಗಿದೆ.
ಉಡುಪಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಸತೀಶ್ ಎನ್. ನೇತೃತ್ವದಲ್ಲಿ ಸತೀಶ್ ಮತ್ತು ಸಿಬ್ಬಂದಿ ಹಾಗೂ ಮಲ್ಪೆಯ ಮುಳುಗುತಜ್ಞ ಈಶ್ವರ್ ಸತತ 4 ಗಂಟೆ ಗಳ ಕಾಲ ಕಾರ್ಯಾಚರಣೆ ನಡೆಸಿ ಶವವನ್ನು ಪತ್ತೆಹಚ್ಚಿದ್ದಾರೆ. ಭಾನುವಾರ ರಾತ್ರಿ ಬೆಳಕಿನ ಅಡಚಣೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಘಟನಾ ಸ್ಥಳಕ್ಕೆ ಶಿರ್ವ ಪಿ ಎಸ್ ಐ ಶ್ರೀಶೈಲ್ ಮುರಾಗೋಡ್ ಮತ್ತು ಸಿಬಂದಿ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಅಗ್ನಿಶಾಮಕದಳದ ಶಂಕರ್, ಉಮೇಶ್, ವಿನಾಯಕ, ಚಂದ್ರಶೇಖರ, ಸುಜೇಶ್ ಮತ್ತು ಆದರ್ಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ದಿಲೀಪ್ ಚಿಕ್ಕ ವಯಸ್ಸಿನಲ್ಲೇ ಕರಾವಳಿಯಾದ್ಯಂತ ದೈವಸ್ಥಾನಗಳಲ್ಲಿ ದೈವ ನರ್ತಕರಾಗಿ, ಸೇವಕರಾಗಿ ಹೆಸರು ಮಾಡಿದ್ದರು. ಬಬ್ಬುಸ್ವಾಮಿ ದೈವದ ನರ್ತಕರಾಗಿ ಹೆಚ್ಚು ಪ್ರಸಿದ್ದಿ ಗಳಿಸಿದ್ದರು.