ಶಿರ್ವ: ರಸ್ತೆ ಅಪಘಾತ; ಹಿರಿಯ ಕಾಂಗ್ರೆಸ್ ನಾಯಕಿ ಲೀನಾ ಮಥಾಯಸ್ ಮೃತ್ಯು

ಉಡುಪಿ: ರಸ್ತೆ ಅಫಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಲೀನಾ ಮಥಾಯಸ್ ಶಿರ್ವ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಭಾನುವಾರ ಶಿರ್ವ ಇರ್ಮಿಚಿ ಚರ್ಚ್ ಬಳಿಯ ರೇಚಲ್ ರೆಸ್ಟೋರೆಂಟ್ ಬಳಿ ನಿಂತಿದ್ದ ಲೀನಾ ಮಥಾಯಸ್ ಅವರಿಗೆ ಬೆಳ್ಮಣ್‌ ಕಡೆಯಿಂದ ಶಿರ್ವಕ್ಕೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಶಿರ್ವ ಪ್ರಾಥಮಿಕ ಕೇಂದ್ರಕ್ಕೆ ಸಾಗಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಅವರು ಮೃತಪಟ್ಟಿದ್ದಾರೆ.

ಲೀನಾ ಮಥಾಯಸ್ ಅವರು ಶಿರ್ವ ಭಾಗದ ಹಿರಿಯ, ಪ್ರಭಾವಿ ಕಾಂಗ್ರೆಸ್ ನಾಯಕಿಯಾಗಿದ್ದು ಉಡುಪಿ ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷರಾಗಿ, ಶಿರ್ವ ಗ್ರಾಮ ಪಂಚಾಯತ್ ನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.