ಶಿರ್ವ: ಮೇಯಲು ಬಿಟ್ಟಿದ್ದ ದನ ಕಳವು: ನಾಲ್ವರು ಆರೋಪಿಗಳ ಬಂಧನ

ಉಡುಪಿ: ಮೇಯಲು ಬಿಟ್ಟಿದ್ದ ದನಗಳನ್ನು ಟೆಂಪೋದಲ್ಲಿ ಹಿಂಸಾತ್ಮಕವಾಗಿ ಕಟ್ಟಿಹಾಕಿ ಸಾಗಿಸುತ್ತಿದ್ದ ಆರೋಪದಡಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಟೆಂಪೋ ಹಾಗೂ ದನವನ್ನು ವಶಪಡಿಸಿಕೊಂಡಿದ್ದಾರೆ.

ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ಸೆ.19ರಂದು ಸಂಜೆ ವಸಂತಿ ಸುನೀತಾ ಕ್ವಾಡ್ರಸ್‌ ಅವರು ಮೇಯಲು ಬಿಟ್ಟಿದ್ದ ಐದು ದನಗಳ ಪೈಕಿ ಎರಡು ವರ್ಷದ ಕಪ್ಪು ಬಣ್ಣದ ದನವೊಂದು ಕಾಣೆಯಾಗಿತ್ತು.

ಹುಡುಕಾಟ ನಡೆಸಿದಾಗ ಸಮೀಪದಲ್ಲಿದ್ದ ಟೆಂಪೋದಲ್ಲಿ ತಮ್ಮ ದನದೊಂದಿಗೆ ಮತ್ತೊಂದು ದನವನ್ನೂ ಹಿಂಸಾತ್ಮಕವಾಗಿ ಕಟ್ಟಿಹಾಕಿರುವುದು ಕಂಡುಬಂದಿತ್ತು. ಟೆಂಪೋ ನೋಂದಣಿ ಸಂಖ್ಯೆ ಪರಿಶೀಲಿಸಿದಾಗ KA 19 B 5641 ಎಂದು ತಿಳಿದುಬಂದಿದೆ.

ವಾಹನದ ಬಳಿ ಉಮ್ಮರಬ್ಬ ಹಾಗೂ ಇತರ ಮೂವರು ಇದ್ದರು. ದೂರುದಾರರನ್ನು ಕಂಡ ಕೂಡಲೇ ಅವರು ಟೆಂಪೋ ಚಲಾಯಿಸಿಕೊಂಡು ಪರಾರಿಯಾಗಿದ್ದರು. ಈ ಕುರಿತು ವಸಂತಿ ಸುನೀತಾ ಕ್ವಾಡ್ರಸ್‌ ನೀಡಿದ ದೂರಿನ ಆಧಾರದಲ್ಲಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಮೊದಲ ಆರೋಪಿ ಕಳತ್ತೂರಿನ ಉಮ್ಮರಬ್ಬ (64) ಅವರನ್ನು ಸೆ.19ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಮೊಹಮ್ಮದ್ ಶರೀಫ್ (31), ಶಂಶುದ್ದೀನ್ (57) ಹಾಗೂ ಮೊಹಮ್ಮದ್ ಆಸೀರ್ (24) ಅವರನ್ನು ಸೆ.20ರಂದು ಕಾಪುವಿನ ಕೊಪ್ಪಲಂಗಡಿಯಲ್ಲಿ ವಾಹನ ಸಮೇತ ಪತ್ತೆಹಚ್ಚಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಟೆಂಪೋ ಹಾಗೂ ದನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತ ಹಾಗೂ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಝಮತ್ ಆಲಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಶಿರ್ವ ಠಾಣೆ ಉಪನಿರೀಕ್ಷಕ ಮಂಜುನಾಥ ಮರಬದ, ಪಡುಬಿದ್ರಿ ಠಾಣೆ ಉಪನಿರೀಕ್ಷಕ ಸಕ್ತಿವೇಲು ಇ., ಅನಿಲ್ ಕುಮಾರ್ ಟಿ. ನಾಯ್ಕ್‌, ಹೆಬ್ರಿ ಠಾಣೆ ಉಪನಿರೀಕ್ಷಕ ಲೋಹಿತ್ ಕುಮಾರ್ ಹಾಗೂ ಶಿರ್ವ, ಕಾಪು ಮತ್ತು ಪಡುಬಿದ್ರಿ ಠಾಣೆಗಳ ಸಿಬ್ಬಂದಿ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಸಿ.ಡಿ.ಆರ್ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.