ಶಿರೂರು ಶ್ರೀಗಳ ಸಾವಿನ ಪ್ರಕರಣ ಜೀವಂತವಾಗಿದೆ: ರವಿಕಿರಣ್ ಮುರ್ಡೇಶ್ವರ

ಉಡುಪಿ: ಶಿರೂರು ಶ್ರೀಗಳ ಸಾವಿನ ಪ್ರಕರಣ ಹಳ್ಳಹಿಡಿದಿಲ್ಲ. ಇನ್ನೂ ಜೀವಂತವಾಗಿದೆ. ಆದರೆ ಪ್ರಕರಣವನ್ನು ಮುಂದುವರಿಸುವವರು ಯಾರು ಎಂಬುವುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ ಎಂದು ಹಿರಿಯ ವಕೀಲ ರವಿಕಿರಣ್‌ ಮುರ್ಡೇಶ್ವರ ಹೇಳಿದರು.
ಶಿರೂರು ಶ್ರೀಗಳ ವರ್ಷದ ಸಂಸ್ಮರಣ ಕಾರ್ಯಕ್ರಮದ ‌ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಶ್ರೀಗಳ ಪೂರ್ವಾಶ್ರಮದ ರಕ್ತ ಸಂಬಂಧಿಗಳು ದೂರು ನೀಡಿದರೆ ಮಾತ್ರ ಪ್ರಕರಣವನ್ನು ಮುಂದುವರಿಸಬಹುದು. ಆದರೆ ಅಭಿಮಾನಿ ಬಳಗದವರು ನ್ಯಾಯಾಲಯದಲ್ಲಿ ದಾವೆ ಹೂಡಲು ಸಾಧ್ಯವಿಲ್ಲ. ಕೊಲೆ ಪ್ರಕರಣ, ಸಂಶಯದ ಸಾವಿಗೆ ಕಾಲಮಿತಿ ಇಲ್ಲ. ಹಾಗಾಗಿ ಈ ಪ್ರಕರಣವನ್ನು ಯಾರದಾರೂ ಮುಂದುವರಿಸುವವರು ಇದ್ದರೆ ಈಗಲೂ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಬಹುದು.
ಅಲ್ಲದೆ ಇನ್ನೂ ದೂರು ನೀಡುವ ಅವಕಾಶ ಇದೆ. ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿಯ ಸಾವು ಸ್ವಭಾವಿಕವಲ್ಲ. ಅದು ಅಸ್ವಭಾವಿಕ ಮರಣ. ಶ್ರೀಗಳ ದೇಹದಲ್ಲಿ ವಿಷದ ಅಂಶ ಇತ್ತು. ಇದನ್ನು ಟಿಎಲ್‌ಸಿ ಪರೀಕ್ಷೆ ಹಾಗೂ ಮರಣೋತ್ತರ ಪರೀಕ್ಷೆಗಳು ಸಾಬೀತು ಪಡಿಸಿವೆ. ‌ಶಿರೂರು ಶ್ರೀಗಳ ಸಾವಿಗೆ ಸಂಬಂಧಿಸಿದ 1115 ಪುಟಗಳನ್ನೊಳಗೊಂಡ ತನಿಖೆಯ ಅಂತಿಮ ವರದಿಯಲ್ಲಿದೆ ಎಂದರು.
ಶಿರೂರು ಶ್ರೀಗಳಿಗೆ ನಡೆಸಿದ ಟಿಎಲ್‌ಸಿ (ತಿನ್‌ ಲೇಯಾರ್‌ ಕ್ರೊಮೋಟೊಗ್ರಫಿ) ಪರೀಕ್ಷೆಯಲ್ಲಿ ಮೂತ್ರ, ರಕ್ತ ಹಾಗೂ ಉದರಾಂಗದಲ್ಲಿ ವಿಷ ಇರುವುದು ಪತ್ತೆಯಾಗಿದೆ ಎಂದು ವೈದ್ಯಾಧಿಕಾರಿ ಹೇಳಿದ್ದರು. ಅಲ್ಲದೆ, ತನಿಖೆ ಸಂದರ್ಭದಲ್ಲಿಯೂ ಈ ಅಂಶವನ್ನು ಅವರು ಪುನರ್‌ ಉಚ್ಚಾರಿಸಿದ್ದರು. ಇದು ಮಾನ್ಯತೆ ಪಡೆದಿರುವ ಪರೀಕ್ಷೆಯೇ ಎಂಬ ತನಿಖಾಧಿಕಾರಿಯ ಪ್ರಶ್ನೆಗೆ ಉತ್ತರ ನೀಡಿದ್ದ ಅವರು, ಇದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಪರೀಕ್ಷೆ ಎನ್ನುವುದನ್ನು ತಿಳಿಸಿದ್ದರು. ಶ್ರೀಗಳ ಮರಣೋತ್ತರ ಪರೀಕ್ಷೆ ನಡೆಸಿದ ಕೆಎಂಸಿಯ ಸಹಾಯಕ ಪ್ರಾಧ್ಯಾಪಕ ಡಾ. ಅಶ್ವಿನಿ ಕುಮಾರ್‌ ಹಾಗೂ ಡಾ. ಎಸ್‌. ಅನಿತಾ ಅವರು ರಕ್ತದಲ್ಲಿ (ಆರ್ಗಾನ್‌ ಪಸ್ಪೋರಸ್‌) ಮತ್ತು ಮೂತ್ರದಲ್ಲಿ (ಬೆಂಜೋ ಡಾಯಾಜಿನ್‌) ವಿಷ ಪತ್ತೆಯಾಗಿದೆ ಎಂಬುವುದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಸಾವಿನ ಸಮಯದಲ್ಲಿ ಆದ ಕೆಲವೊಂದು ಗೊಂದಲದಿಂದ ತನಿಖೆಯೂ ಸರಿಯಾಗಿ ನಡೆದಿಲ್ಲ ಎಂದರು.