ಶಿರಾಡಿ ಘಾಟ್ ನಲ್ಲಿ ಏಕಮುಖ ಸಂಚಾರ: ಬೆಂಗಳೂರು ಕಡೆಗೆ ತೆರಳುವ ವಾಹನಗಳಿಗೆ ತಾತ್ಕಾಲಿಕ ಪರ್ಯಾಯ ಮಾರ್ಗದ ವ್ಯವಸ್ಥೆ

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುವ ವಾಹನಗಳಿಗೆ ಶಿರಾಡಿ ಘಾಟ್ ಅನ್ನು ಏಕಮುಖ ಮಾರ್ಗವನ್ನಾಗಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ಮಾರ್ಗವು ಶಿರಾಡಿ ಘಾಟ್ ಮೂಲಕ ಯಥಾವತ್ ಮುಂದುವರಿದರೆ, ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ದೋಣಿಗಲ್ ಬಳಿಯ ಕಪ್ಪಳ್ಳಿ-ಕೆಸಗಾನಹಳ್ಳಿ ಗ್ರಾಮದ ರಸ್ತೆಯಲ್ಲಿ ಸಂಚರಿಸಬೇಕು. ಇದು 2-ಕಿಮೀ ಉದ್ದದ ಮಾರ್ಗವಾಗಿದ್ದು ತಾತ್ಕಾಲಿಕ ಕ್ರಮದ ಭಾಗವಾಗಿ ಪರ್ಯಾಯ ಮಾರ್ಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇನ್ನು 5 ರಿಂದ 6 ದಿನಗಳಲ್ಲಿ ರಸ್ತೆ ಸಿದ್ಧವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ತಿಳಿಸಿದ್ದಾರೆ.

ಶಿರಾಡಿ ಘಾಟ್ ರಸ್ತೆ ಅಭಿವೃದ್ದಿಯಲ್ಲಿ ವಿಳಂಬವಾಗಿರುವ ಒಪ್ಪಿಕೊಂಡ ಸಚಿವರು, “ಬೇಸಗೆಯಲ್ಲಿ ರಸ್ತೆ ಕಾಮಗಾರಿಯನ್ನು ಮಾಡದಿದ್ದುದರಿಂದ ಮಳೆಗಾಲದಲ್ಲಿ ಸಂಚಾರ ತೊಂದರೆಗಳನ್ನು ಅನುಭವಿಸುವಂತಾಯಿತು. ಇದಕ್ಕಾಗಿ ನಾನು ಅವರನ್ನು ಸಿಟ್ಟಿನಿಂದ ಹಿಗ್ಗಾಮುಗ್ಗಾ ಬೈದಿದ್ದೇನೆ. 39 ಕಿ.ಮೀ ಉದ್ದದ ಶಿರಾಡಿ ಘಾಟ್‌ನಲ್ಲಿ ಕೇವಲ 20 ಕಿ.ಮೀ ಮಾತ್ರ ವಾಹನ ಸಂಚಾರಕ್ಕೆ ಯೋಗ್ಯವಾಗಿದೆ. ಘಾಟಿಯಲ್ಲಿ 2-3 ಅಪಾಯಕಾರಿ ತಾಣಗಳಿವೆ. ಕೆಲಸ ಮುಗಿಸಲು ನಾವು ಮಾರ್ಚ್ 2023 ರವರೆಗೆ ವಿಸ್ತರಣೆಯನ್ನು ನೀಡಿದ್ದೇವೆ. ಕೆಲಸ ಮುಗಿಸುವುದು ನಮ್ಮ ಬದ್ಧತೆ. ಮುಂದಿನ ಮಳೆಗಾಲದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ” ಎಂದಿದ್ದಾರೆ.

ರಸ್ತೆ ಕಾಮಗಾರಿಯನ್ನು ವಹಿಸಿಕೊಂಡಿದ್ದ ಗುತ್ತಿಗೆದಾರ ದಿವಾಳಿಯಾದ ಕಾರಣ ಕಾಮಗಾರಿಯಲ್ಲಿ ವಿಳಂಬವಾಗಿದೆ ಎಂದ ಅವರು ಆ ಬಗ್ಗೆ ಚರ್ಚಿಸುವುದು ಬೇಡ, ಕಾಮಗಾರಿ ವಿಳಂಬವಾಗಿದೆ ಹಾಗೂ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದಿದ್ದಾರೆ.