ಗ್ರೀನ್ ಕಾರಿಡಾರ್ ಮೂಲಕ ಶಿವಮೊಗ್ಗದ ಬಾಲಕಿ ಕೆಎಮ್ ಸಿ ಆಸ್ಪತ್ರೆಗೆ ದಾಖಲು

ಉಡುಪಿ: ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಶಿವಮೊಗ್ಗದ ಬಾಲಕಿಯನ್ನು ಗ್ರೀನ್ ಕಾರಿಡಾರ್ ಮೂಲಕ ಮಣಿಪಾಲದ ಕೆಎಮ್ ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯಾಧಿಕಾರಿಗಳು ತುರ್ತು ಪರಿಸ್ಥಿತಿಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ರವಾನಿಸಲು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗಿತ್ತು. ಸುಮಾರು 200 ಕಿಲೋಮೀಟರ್‌ ದೂರದ ಪ್ರಯಾಣಕ್ಕೆ “ಗ್ರೀನ್ ಕಾರಿಡಾರ್” ರೂಪಿಸಲಾಯಿತು. ಈ ವೇಳೆ ಟ್ರಾಫಿಕ್‌ ಪೊಲೀಸ್ ಅಧಿಕಾರಿಗಳು ಮಾರ್ಗದಲ್ಲಿನ ಸಂಚಾರವನ್ನು ನಿಯಂತ್ರಿಸಿ, ಅಂಬುಲೆನ್ಸ್‌ಗೆ ನಿರಂತರ ಮತ್ತು ನಿರ್ಬಂಧರಹಿತ ಸಂಚಾರವನ್ನು ಖಚಿತಪಡಿಸಿದರು.

ಅಂಬುಲೆನ್ಸ್ ಕೇವಲ 2 ಗಂಟೆ 30 ನಿಮಿಷಗಳಲ್ಲಿ ಸುರಕ್ಷಿತವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ತಲುಪಿದ್ದು, ಅಲ್ಲಿ ವೈದ್ಯರು ಶಿಶುವಿಗೆ ಅಗತ್ಯ ಚಿಕಿತ್ಸೆ ಆರಂಭಿಸಿದ್ದಾರೆ.

ಈ ಪ್ರಯಾಣವನ್ನು ಯಶಸ್ವಿಯಾಗಿ ಮುನ್ನಡೆಸಿದ ಡ್ರೈವರ್‌ ಶಂಶುದ್ದೀನ್‌, ಡ್ರೈವರ್‌ ಅರುಣ್‌ ಮತ್ತು ಟೆಕ್ನೀಷಿಯನ್‌ ಶ್ರೀಕಾಂತ್‌ ಅವರ ಸೇವೆ ಕೂಡ ಶ್ಲಾಘನೀಯವಾಗಿದೆ.

ಈ ಮಾನವೀಯ ಕಾರ್ಯಕ್ಕಾಗಿ ಶಿವಮೊಗ್ಗ ಮತ್ತು ಮಧ್ಯಂತರ ಜಿಲ್ಲೆಯ ಪೊಲೀಸರ ಸಮಯಪ್ರಜ್ಞೆ, ಸಂಯೋಜನೆ ಹಾಗೂ ತ್ವರಿತ ಪ್ರತಿಕ್ರಿಯೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಬಾಲಕಿಯ ಸ್ಥಿತಿ ಸ್ಥಿರವಾಗಿದ್ದು, ಗ್ರೀನ್yn ಕಾರಿಡಾರ್ ಯಶಸ್ವಿಯಾಗಿದೆ.