ಉಡುಪಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ಆರೋಪಿಸಿದ್ದಾರೆ.
ಕೊರೊನಾ ಸಮಸ್ಯೆ ಎದುರಾಗಿನಿಂದಲೂ ಜಿಲ್ಲೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕೊರೊನಾ ನೆಪದಲ್ಲಿ ಜನರಿಗೆ ದೌರ್ಜನ್ಯ, ದಬ್ಬಾಳಿಕೆ ಮಾಡಲಾಗುತ್ತಿದೆ. ಇದಕ್ಕೆ ರಕ್ಷಾ ಸಂಶಯಾಸ್ಪದ ಸಾವಿನ ಪ್ರಕರಣ, ಕೊರೊನಾ ಪಾಸಿಟಿವ್ ಸುಳ್ಳು ವರದಿ ಹಾಗೂ ಕುಂದಾಪುರದ ವ್ಯಕ್ತಿಯ ಮೃತ ದೇಹ ಅದಲು ಬದಲು ಪ್ರಕರಣಗಳೇ ಸ್ಪಷ್ಟ ನಿದರ್ಶನಗಳು ಎಂದು ದೂರಿದ್ದಾರೆ.
ಜಿಲ್ಲಾಡಳಿತದ, ಜನಪ್ರತಿನಿಧಿಗಳ ಉಡಾಫೆ ವರ್ತನೆಯಿಂದ ಜಿಲ್ಲೆಯ ಜನರು ಹೈರಾಣಾಗಿದ್ದು, ಪ್ರತಿಭಟನೆಯ ಮೂಲಕ ತಮಗಾಗುತ್ತಿರುವ ಅನ್ಯಾಯವನ್ನು ಹೊರಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅನ್ಯಾಯ, ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗಳ ಬಗ್ಗೆ ಪ್ರಶ್ನೆ ಮಾಡಬಾರದು ಎನ್ನುವುದು ಸಂವಿಧಾನ ವಿರೋಧಿ. ಇದು ಜನರ ಧ್ವನಿಯನ್ನು ಅಡಗಿಸುವ ಹುನ್ನಾರವಾಗಿದ್ದು, ಜಿಲ್ಲೆಯಲ್ಲಿ ಏನಾದರೂ ಸರ್ವಾಧಿಕಾರಿ ಸರ್ಕಾರವಿದೆಯೇ.? ಎಂದು ಪ್ರಶ್ನಿಸಿದ್ದಾರೆ.
ರಕ್ಷಾ ಸಾವಿನ ತನಿಖೆಯಲ್ಲಿ ಗೊಂದಲ:
ರಕ್ಷಾ ಸಾವಿನ ತನಿಖೆಯನ್ನು ಜಿಲ್ಲಾಧಿಕಾರಿಗಳು ಡಿಎಚ್ ಒ ನೇತೃತ್ವದಲ್ಲಿ ನಡೆಸಲು ಸೂಚಿಸಿದ ಒಂದು ಗಂಟೆಯೊಳಗೆ ಶಾಸಕರು ಸಿಒಡಿ ತನಿಖೆಗೆ ಶಿಫಾರಸು ಮಾಡಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಶಾಸಕರಿಗೆ ಜಿಲ್ಲೆಯ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.