ಉಡುಪಿ: ನೆರೆಮನೆಯವರ ಮಕ್ಕಳಂತೆಯೇ ನಮ್ಮ ಮಕ್ಕಳೂ ಸಹ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದಬೇಕು ಎನ್ನುವ ಹಂಬಲದಿಂದ ಆರ್ಥಿಕವಾಗಿ ಸಬಲರಲ್ಲದ ಅನೇಕ ಪೋಷಕರು, ಸಾಲ ಮಾಡಿ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿರುವ ರೂಢಿ ಹೆಚ್ಚಾಗುತ್ತಿದ್ದು, ಇದರಿಂದಾಗಿ ಪೋಷಕರ ಆರ್ಥಿಕ ಪರಿಸ್ಥಿತಿ ಬಹಳಷ್ಟು ಹದಗೆಟ್ಟ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ಪೋಷಕರು ಮಕ್ಕಳಿಗೆ ಉಚಿತವಾಗಿ ಸ್ಪೋಕನ್ ಇಂಗ್ಲಿಷ್ ಕಲಿಸುತ್ತಿರುವ ಸರಕಾರಿ ಮತ್ತು ಅನುದಾನಿತ ಶಾಲೆಗಳತ್ತ ಮಕ್ಕಳನ್ನು ಕರೆತರುವ ಮೂಲಕ ಮಕ್ಕಳ ಇಂಗ್ಲಿಷ್ ಸಂವಹನದ ಕನಸನ್ನು ನನಸಾಗಿಸುವುದರೊಂದಿಗೆ ಆರ್ಥಿಕವಾಗಿ ತಮ್ಮ ಮೇಲೆ ಬೀಳುವ ಹೊರೆಯನ್ನು ತಗ್ಗಿಸಿಕೊಳ್ಳಬಹುದು ಎಂದು ಉಡುಪಿಯ ಶೆಫಿನ್ಸ್ ನ ನಿರ್ದೇಶಕ ಮನೋಜ್ ಕಡಬ ಹೇಳಿದರು.
ಅವರು ಉಡುಪಿ ಜಿಲ್ಲೆಯ ಕುಂತಳನಗರದ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್
13ರಂದು ನಡೆದ ಮಕ್ಕಳ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿಯ ಉದ್ಘಾಟನಾ ಸಮಾರಂಭದ ಮುಖ್ಯ
ಅತಿಥಿಯಾಗಿ ಮಾತನಾಡುತ್ತಿದ್ದರು.
ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ ಆರಂಭಿಸುವ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸಂಖ್ಯೆ
ಹೆಚ್ಚಾಗಿ, ಕನ್ನಡ ಮಾಧ್ಯಮ ಶಾಲೆಗಳು ಉಳಿಯುವಂತಾಗಲಿದೆ. ಇದರ ಜೊತೆಗೆ ಅತಿಥಿ ಹಾಗೂ ಗೌರವ ಶಿಕ್ಷಕರೂ
ಸ್ಪೋಕನ್ ಇಂಗ್ಲೀಷ್ ನಲ್ಲಿ ಪಳಗುವುದರಿಂದ ಅವರ ಅಧ್ಯಾಪನದ ಗುಣಮಟ್ಟವೂ ಹೆಚ್ಚಾಗಲಿದೆ ಎಂದರು.
ಕುಂತಳನಗರ ಶಾಲೆಯಲ್ಲಿ ಶಿಕ್ಷಕಿಯರು ತರಬೇತಿ ಪಡೆದ ಕೂಡಲೇ ತಾವು ಕಲಿತದ್ದನ್ನು ಮಕ್ಕಳಿಗೆ ಕಲಿಸಿದ್ದು, ಅವರು ಆಂಗ್ಲ ಭಾಷೆಯಲ್ಲಿ ತಾವು ಕಲಿತ ಸಂಭಾಷಣೆಯನ್ನು ಪ್ರದರ್ಶಿಸಿದ್ದರ ಬಗ್ಗೆ ಅವರು ಬಹಳಷ್ಟು ಮೆಚ್ಚುಗೆ ಸೂಚಿಸಿ, ತರಬೇತಿಯ ಫಲಿತಾಂಶ ಕೇವಲ ಒಂದು ವಾರದಲ್ಲಿಯೇ ಕಂಡುಬಂದಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಶಾಲೆಯಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಕಾರಣಿಕರ್ತರಾದ ಶಾಲಾಡಳಿತ ಮಂಡಳಿ ಸದಸ್ಯೆ ಸಂದ್ಯಾ ಶೆಟ್ಟಿಯವರಿಗೆ ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಅಶೋಕ್ ಕುಮಾರ್
ಶೆಟ್ಟಿಯವರು ತಮ್ಮ ಉದ್ಘಾಟನಾ ಬಾಷಣದಲ್ಲಿ, ಸದ್ರಿ ಕನ್ನಡ ಮಾಧ್ಯಮ ಶಾಲೆಯಲ್ಲಿನ ಮುಖ್ಯೋಪಾಧ್ಯಾಯರು
ಸಹ ಶೆಫಿನ್ಸ್ ಸಂಸ್ಥೆಯ ಪ್ರಭಾವದಿಂದ ಇಂಗ್ಲೀಷ್ ನಲ್ಲಿ ತಮ್ಮ ಸ್ವಾಗತ ಭಾಷಣ ಮಾಡಿರುವುದನ್ನು ಕಂಡು
ಸಂತಸವಾಗುತ್ತದೆ ಎಂದರು. ಸ್ಪೋಕನ್ ಇಂಗ್ಲಿಷ್ ತರಬೇತಿ ಸಮಾಜದ ಮೇಲೆ ಎಷ್ಟೊಂದು ಪ್ರಭಾವ ಬೀರುತ್ತಿದೆ
ಎನ್ನುವುದನ್ನು ಇದು ಬಿಂಬಿಸುತ್ತದೆ ಎನ್ನುವುದರ ಜೊತೆಗೆ ಇನ್ನು 01 ವರ್ಷ ಕಳೆದಲ್ಲಿ ಶಾಲೆಯ ಎಲ್ಲಾ ಮಕ್ಕಳೂ
ಇಂಗ್ಲೀಷ್ ನಲ್ಲಿ ಮಾತನಾಡುವಂತಾಗುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಶೆಫಿನ್ಸ್ನ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಕಾರ್ಯಕ್ರಮ ಸಂಯೋಜಕಿ ಅರ್ಪಿತಾ ಬ್ರಹ್ಮಾವರ ಪ್ರಾಸ್ತಾವಿಕ ನುಡಿಯಲ್ಲಿ ಆಂದೋಲನದ ಬಗ್ಗೆ ವಿವರಿಸುತ್ತಾ, ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಆಂದೋಲನವು ಅತ್ಯಂತ ಕ್ರಿಯಾಶೀಲವಾಗಿದ್ದು, ಈಗಾಗಲೇ 24 ಶಾಲೆಯ 48 ಅತಿಥಿ ಹಾಗೂ ಗೌರವ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ಈ ವರೆಗೆ 11 ಶಾಲೆಯಗಳಲ್ಲಿ ದಾನಿಗಳ ಸಹಾಯದಿಂದ ಮಕ್ಕಳಿಗೆ ಪುಸ್ತಕ ವಿತರಿಸಿ, ಸ್ಪೋಕನ್ ಇಂಗ್ಲೀಷ್ ಕ್ಲಾಸ್ನ್ನು ಆರಂಭಿಸಿರುತ್ತೇವೆ. ಇನ್ನು 13 ಶಾಲೆಗಳಲ್ಲಿ ಮಕ್ಕಳು ಪುಸ್ತಕಗಳಿಗಾಗಿ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಸೂಕ್ತ ದಾನಿಗಳು ಮುಂದೆ ಬಂದಲ್ಲಿ, ಈ ಎಲ್ಲಾ ಶಾಲೆಗಳಲ್ಲೂ ಶೀಘ್ರವಾಗಿ ಸ್ಪೋಕನ್ ಇಂಗ್ಲಿಷ್ ತರಬೇತಿಗಳು ಆರಂಭಗೊಳ್ಳಲಿವೆ. ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಚನೆ ಸಂಸ್ಥೆಯದ್ದಾಗಿದೆ ಎಂದು ತಿಳಿಸಿದರು.
ನಮ್ಮ ಕನ್ನಡ ಮಾಧ್ಯಮ ಶಾಲೆಗಳು ಯಾವುದರಲ್ಲೂ ಕಡಿಮೆ ಇಲ್ಲ. ಇಲ್ಲಿ ನಾವು ಇಂಗ್ಲಿಷ್ ನ್ನು ಭಾಷೆಯಾಗಿ ಕಲಿಸುತ್ತಿದ್ದೇವೆಯೇ ಹೊರತು ಸಂಸ್ಕ್ರತಿಯಾಗಿ ಅಲ್ಲ ಎನ್ನುವುದನ್ನು ಸ್ಪಷ್ಟೀಕರಿಸಿದರು.
ಸಮಾರಂಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ನ ಚಟುವಟಿಕಾ ಪುಸ್ತಕಗಳನ್ನು ವಿತರಿಸಲಾಯಿತು.
ಮಕ್ಕಳು ಆಂಗ್ಲ ಭಾಷೆಯಲ್ಲಿ ತಾವು ಕಲಿತ ಸಂಭಾಷಣೆಗಳನ್ನು ಪ್ರದರ್ಶಿಸಿದರು.
ತರಬೇತಿ ಪಡೆದ ಶಾಲಾ ಶಿಕ್ಷಕಿಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು ಹಾಗೂ ಇನ್ನೋವೇಟಿವ್
ಟೀಚಿಂಗ್ ಅವಾರ್ಡ್ ವಿಜೇತ ಗೌರವ ಶಿಕ್ಷಕಿ ಜೋಸ್ಲಿನ್ ಲಿಝೀ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳ ಪೋಷಕರು ಮತ್ತು ಶಾಲಾಭಿವೃದ್ಧಿ ಮಂಡಳಿಯ ಅಧ್ಯಕ್ಷೆ ರೇಷ್ಮಾ ತಮ್ಮ ಮಕ್ಕಳ ಇಂಗ್ಲೀಷ್ ಕಲಿಕಾ ಪ್ರದರ್ಶನ ನೋಡಿ ಮಾತೇ ಬರುತ್ತಿಲ್ಲ. ಇದು ಅತ್ಯಂತ ಸಂತ ವಿಷಯ ಎಂದರು.
ಸಮಾರಂಭದಲ್ಲಿ ಅತಿಥಿಗಳಾಗಿ ಶಾಲಾಡಳಿತ ಮಂಡಳಿಯ ಸದಸ್ಯ ಸಂದೀಪ್ ಶೆಟ್ಟಿ, ಶಾಲಾಭಿವೃದ್ಧಿ ಮಂಡಳಿಯ
ಉಪಾಧ್ಯಕ್ಷೆ ಆಶಾ, ಶೆಫಿನ್ಸ್ ನ ಟ್ರಸ್ಟಿ ಫಿನ್ಲಿ ಮನೋಜ್, ವಿದ್ಯಾರ್ಥಿ ನಾಯಕರು, ಪೋಷಕರು ಹಾಗೂ ಶಾಲಾ
ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸ್ವಾಗತಿಸಿ, ಶೆಫಿನ್ಸ್ ನಿಂದ ತರಬೇತಿ ಪಡೆದ ಅತಿಥಿ ಶಿಕ್ಷಕಿಯರಾದ ಜೋಸ್ಲಿನ್ ಕಾರ್ಯಕ್ರಮ ನಿರೂಪಿಸಿ, ಪವಿತ್ರಾ ಮಡಿವಾಳ ವಂದಿಸಿದರು.