ಉಡುಪಿ ಜ. 02: ‘ಸ್ಫೊಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ’ ಆಂದೋಲನಕ್ಕೆ ಇನ್ನಷ್ಟು ಶಕ್ತಿ
ತುಂಬುವ ಉದ್ದೇಶದಿಂದ ಶಿಶುಗೀತೆಗಳ ಪುಸ್ತಕ ‘ಶೆಫಿನ್ಸ್ ರೈಮ್ಸ್ 01’ ಮತ್ತು ಈ ಗೀತೆಗಳ ಯೂ ಟ್ಯೂಬ್ ಚಾನೆಲನ್ನು
ಉಡುಪಿಯ ಕುಂತಳನಗರ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿಯ ಪುಟಾಣಿಗಳಾದ ಸಮೃದ್ಧಿ ಮತ್ತು
ಮಾನ್ವಿಕ್ ಇವರು ಬಿಡುಗಡೆಗೊಳಿಸಿದರು. ಈ ಪುಸ್ತಕವು ಉಡುಪಿಯ ಶೆಫಿನ್ಸ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್
ಮಕ್ಕಳಿಗಾಗಿ ಬಿಡುಗಡೆಗೊಳಿಸುತ್ತಿರುವ ಪ್ರಪ್ರಥಮ ಶಿಶುಗೀತೆಗಳ ಪುಸ್ತಕವಾಗಿದ್ದು, ಇದರಲ್ಲಿ ಕನ್ನಡ, ಕಂಗ್ಲಿಷ್ ಮತ್ತು ಇಂಗ್ಲಿಷ್ ನಲ್ಲಿರುವ ಒಟ್ಟು 12 ಶಿಶುಗೀತೆಗಳಿವೆ.
ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶೆಫಿನ್ಸ್ ನಿರ್ದೇಶಕ ಹಾಗೂ ಶಿಶುಗೀತೆಗಳ ರಚನೆಕಾರ ಮನೋಜ್ ಕಡಬ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಇಂಗ್ಲಿಷ್ ಸಂವಹನವನ್ನು ಚೆನ್ನಾಗಿ ಮಾಡಬೇಕು, ಯಾವುದೇ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಡಿಮೆಯಿಲ್ಲದಷ್ಟು ಉತ್ತಮವಾಗಿ ಇಂಗ್ಲಿಷ್ ನಲ್ಲಿ ಮಾತನಾಡಬೇಕು. ಆಗ ಮಾತ್ರ ಪೋಷಕರು ಮತ್ತೆ ಕನ್ನಡ ಮಾಧ್ಯಮ ಶಾಲೆಗಳತ್ತ ತಮ್ಮ ಮಕ್ಕಳನ್ನು ಕಳುಹಿಸುವತ್ತ ಮನಸು ಮಾಡುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಶೆಫಿನ್ಸ್ ಈಗಾಗಲೇ ಹಲವಾರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಅತಿಥಿ ಹಾಗೂ ಗೌರವ ಶಿಕ್ಷಕರಿಗೆ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ರಾಜ್ಯದ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಿಗೆ ವಿಸ್ತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಇಂಗ್ಲಿಷ್ ಪ್ರೀತಿಯನ್ನು ಹೆಚ್ಚಿಸುವ ಉದ್ದೇಶದಿಂದ ಶೆಫಿನ್ಸ್ ರೈಮ್ಸ್ 01 ಬಿಡುಗಡೆಯಾಗಿದ್ದು, ಇದರಲ್ಲಿ 2 ಕನ್ನಡ, 3 ಕಂಗ್ಲಿಷ್ (ಕನ್ನಡ ಮತ್ತು ಇಂಗ್ಲಿಷ್ ಮಿಶ್ರಣದ) ಹಾಗೂ 7 ಇಂಗ್ಲಿಷ್ ಶಿಶುಗೀತೆಗಳಿವೆ. ಈ ಗೀತೆಗಳನ್ನು ಹಾಡುವ ವಿಧಾನವು ಯೂಟ್ಯೂಬ್ ಮೂಲಕ ಲಭ್ಯವಾಗುತ್ತಿದೆ. ಮಕ್ಕಳು ಪುಸ್ತಕವನ್ನು ನೋಡಿ, ಯೂಟ್ಯೂಬ್ ನಲ್ಲಿ ಕೇಳಿ, ಈ ಗೀತೆಗಳನ್ನು ಕಲಿಯಬಹುದು ಎಂದರು.
ಪುಸ್ತಕದ ಬೆಲೆಯು ರೂ. 20/- ಆಗಿದ್ದು, ತರಬೇತಿಗಳು ಆರಂಭಗೊಂಡಿರುವ ಎಲ್ಲಾ 12 ಶಾಲೆಗಳ ಮಕ್ಕಳಿಗೆ ಈ ಪುಸ್ತಕವು ಉಚಿತವಾಗಿ ಲಭ್ಯವಾಗಲಿದ್ದು, ನಂತರದಲ್ಲಿ ಮೊದಲು ಬೇಡಿಕೆ ಸಲ್ಲಿಸಿದ 15 ಕನ್ನಡ ಮಾಧ್ಯಮ ಶಾಲೆಗಳಿಗೆ ತಲಾ 50 ಪ್ರತಿಗಳನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚುವರಿ ಪ್ರತಿಗಳು ಬೇಕಾಗಿದ್ದಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದರು.
ಈ ಗೀತೆಗಳನ್ನು ಕನ್ನಡ ಮಾಧ್ಯಮ ಶಾಲೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಯಾದ ಕುಂತಳನಗರ
ಭಾರತೀ ಹಿರಿಯ ಪ್ರಾಥಮಿಕ ಶಾಲೆಯ ಗೌರವ ಶಿಕ್ಷಕಿ ಜೋಸ್ಲಿನ್ ಲಿಝಿ ಡಿಸೋಜ ಮತ್ತು ವಿದ್ಯಾರ್ಥಿಗಳಾದ ಧನ್ವಿ, ದೀವಿತ,
ಅಮೋಘ ಮತ್ತು ಆಕಾಶ್ ಇವರಿಂದ ಯೂಟ್ಯೂಬ್ ಗಾಗಿ ಹಾಡಿಸಿ ರೆಕಾರ್ಡಿಂಗ್ ಮಾಡಲಾಗಿದೆ. ಶಿಕ್ಷಕಿ ಮತ್ತು
ಮಕ್ಕಳನ್ನು ಗೌರವಿಸಲಾಯಿತು.
ಪುಸ್ತಕ ಬಿಡುಗಡೆ ಮಾಡಿದ ಮಕ್ಕಳ ತಾಯಂದಿರಾದ ರಂಜಿತಾ ಮತ್ತು ಪ್ರೇಮಾ ಮಾತನಾಡಿ, ಖ್ಯಾತ ನಾಮರಿಗೆ
ಮಾತ್ರ ಲಭ್ಯವಾಗುವ ಇಂತಹ ಅದ್ಭುತ ಅವಕಾಶವನ್ನು ತಮ್ಮ ಮಕ್ಕಳಿಗೆ ಕಲ್ಪಿಸಿಕೊಟ್ಟದ್ದಕ್ಕೆ ಶೆಫಿನ್ಸ್ ಸಂಸ್ಥೆಗೆ ಮತ್ತು ಶಾಲೆಗೆ
ಧನ್ಯವಾದ ಹೇಳಿದರು. ಗೀತೆಗಳನ್ನು ಹಾಡಿದ ಮಕ್ಕಳ ಪೋಷಕರಾದ ಗುಲಾಬಿ, ರೇಶ್ಮಾ, ವನಿತಾ, ದಿನಕರ್ ಹಾಗೂ ಶಂಕರ್
ಉಪಸ್ಥಿತರಿದ್ದು, ತಮ್ಮ ಮಕ್ಕಳಿಗೆ ದೊರೆತ ಅವಕಾಶಕ್ಕೆ ಕೃತಜ್ಞತೆ ಸೂಚಿಸಿದರು.
ಮುಖ್ಯ ಅತಿಥಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾತನಾಡಿ, ಹಲವಾರು ಶಾಲೆಗಳಲ್ಲಿ ಶೆಫಿನ್ಸ್
ತರಬೇತಿಗಳು ನಡೆಯುತ್ತಿದ್ದರೂ, ತಮ್ಮ ಶಾಲೆಯನ್ನು ಈ ಪುಸ್ತಕ ಬಿಡುಗಡೆಗೆ ಗುರುತಿಸಿದ್ದಕ್ಕಾಗಿ ಸಂಸ್ಥೆಗೆ ಧನ್ಯವಾದ
ತಿಳಿಸಿದರು. ಶಾಲೆಯಲ್ಲಿ ಶೆಫಿನ್ಸ್ ನ ಸ್ಪೋಕನ್ ಇಂಗ್ಲಿಷ್ ತರಬೇತಿ ಆರಂಭಗೊಂಡ ಬಳಿಕ ಮಕ್ಕಳು ಚಟುವಟಿಕೆಗಳ
ಮೂಲಕ ಇಂಗ್ಲಿಷ್ ಕಲಿಯಲು ಬಹಳಷ್ಟು ಆಸಕ್ತಿ ತೋರುತ್ತಿದ್ದು, ಶಾಲೆಯ ಎಲ್ಲಾ ಮಕ್ಕಳೂ ಸದ್ಯದಲ್ಲಿ ಇಂಗ್ಲಿಷ್ ನಲ್ಲಿ
ನಿರರ್ಗಳವಾಗಿ ಮಾತನಾಡುವ ಭರವಸೆ ತಮಗಿದೆ ಹಾಗೂ ಈಗ 70 ಇರುವ ಮಕ್ಕಳ ಸಂಖ್ಯೆಯು ಮುಂದಿನ ವರ್ಷ 100 ರ
ಗಡಿಯನ್ನು ದಾಟುವ ಆಶಾಭಾವನೆಯೂ ತಮಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪುಸ್ತಕ ಮುದ್ರಣಗೊಳ್ಳಲು ಸಹಕರಿಸಿದ ಉಡುಪಿಯ ಶೆಫಿನ್ಸ್ ಎಂಟರ್ಪ್ರೈಸಸ್, ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್,
ಸುಮನಸಾ ಕೊಡವೂರು, ಶ್ರೀ ವಿಘ್ನೇಶ್ವರ ಪ್ರಿಂಟರ್ಸ್, ಬೆಂಗಳೂರಿನ ಸನ್ ರೈಸ್ ಪ್ರಿಂಟ್ಸ್, ಸ್ವರಾಜ್ ಶೆಟ್ಟಿ ಪರ್ಕಳ ಮತ್ತು
ಯೂಟ್ಯೂಬ್ ವಿಡಿಯೋಗಳಿಗೆ ಸಹಕರಿಸಿದ ಕೆ ಮಹೇಶ್ ಶೆಣೈ ಕಟಪಾಡಿ, ಇಜಾಝ್ ಮನ್ನ ಹಾಗೂ ಫಿನ್ಲಿ ಮನೋಜ್
ಇವರಿಗೆ ಗೌರವ ಪ್ರತಿಗಳನ್ನು ಅವರಿರುವ ಸ್ಥಳಗಳಿಗೆ ತಲುಪಿಸಲಾಗುವುದು ಎಂದು ತಿಳಿಸಿ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಪುಸ್ತಕದ ಪ್ರತಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಎಲ್ಲಾ ಮಕ್ಕಳಿಗೆ ಮತ್ತು ಶಿಕ್ಷಕಿಯರಿಗೆ ಹಂಚಿದರು.
ಶೆಫಿನ್ಸ್ ನ ಟ್ರಸ್ಟಿ ಫಿನ್ಲಿ ಮನೋಜ್, ಶಾಲಾ ಅಧ್ಯಾಪಕ ವೃಂದ, ಮಕ್ಕಳ ಪೋಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪುಸ್ತಕಗಳನ್ನು ಉಡುಪಿಯ ಕುಂಜಿಬೆಟ್ಟಿನಲ್ಲಿರುವ ಸಂಸ್ಥೆಯ ಕಛೇರಿಯಿಂದ ಪಡೆದುಕೊಳ್ಳಬಹುದು. ಹಾಗೂ ಈ ಕೆಳಗಿನ
ಯೂಟ್ಯೂಬ್ ಲಿಂಕ್ ಮೂಲಕ ಎಲ್ಲ ವಿಡಿಯೋಗಳನ್ನು ನೊಡಬಹುದು.
ಯೂಟ್ಯೂಬ್ ಲಿಂಕ್: https://www.youtube.com/@ShefinsRhymes-zn2zn