ಅವಳೊಂದಿಗೆ ನನ್ನ ಚೇಷ್ಟೆಗಳು ಎಷ್ಟಿತ್ತೆಂದರೆ !:ಆಕೆ ಜತೆಗಿದ್ದರೆ ನಾನು ರಸಿಕರ ರಸಿಕ !

ಪ್ರೀತಿ ಹುಟ್ಟಲು ಅದು ಪಕ್ವಕಾಲವಾಗಿತ್ತೋ ಏನೋ. ಸೋನೆ ಮಳೆಯ ಆ ದಿನ ಪಿಯುಸಿಯ ಕನ್ನಡ ಪೀರಿಯಡ್ನಲ್ಲಿ ಪ್ರಾಧ್ಯಾಪಕರು ‘ಜೋಗ್ಯೋರ ಅಂಜಪ್ಪನ ಕೋಳೀ ಕತೆ’ ಅಂತ ಪಿಟೀಲು ಕುಯ್ಯುತ್ತಿದ್ದಾಗ ಪಕ್ಕಾ ತರಲೆ ನನ್ಮಗ ನಾನು ಕೊನೆಯ ಬೆಂಚಿಗಂಟಿಕೊಂಡು ಕಪಿಚೇಷ್ಟೆಯಲ್ಲಿ ತೊಡಗಿದ್ದೆ. ಉಪನ್ಯಾಸಕರು ತಿರುಗುವಾಗ ಪಾಠ ಆಲಿಸುವಂತೆ ಪೋಸು ಕೊಡುತ್ತಿದ್ದೆನಾದರೂ ಬಾಯಿ ನಿಲ್ಲದೆ ಸಣ್ಣ ಧ್ವನಿಯಲ್ಲಿ ನಿತೀಶ್, ನಾಗರಾಜ ಮತ್ತು ಮನು ಎಂಬ ನನ್ ತರ್ಲೆ ಗೆಳೆಯರ ಜೊತೆಗೆ ಹರಟೆಗಿಳಿದಿತ್ತು. 

ಎಸ್ಎಸ್ಎಲ್ಸಿಯ ಮ್ಯಾಥ್ಸ್ ನಲ್ಲಿ ಡುಮ್ಕಿ ಹೊಡೆದಿದ್ದ ಆಕೆ ರೀ ಎಕ್ಸಾಂ ಬರೆದು ಲೇಟ್ ಅಡ್ಮೀಶನ್ ಸಾರ್.. ಅಂತ ಹಲ್ಲು ಕಿರಿಯುತ್ತ ತರಗತಿಯ ಬಾಗಿಲಿನಲ್ಲಿ ನಿಂತಿದ್ದಳು. ತರಗತಿಯೊಳಗೆ ನೀರವ ಮೌನ. ಎಲ್ಲರೂ ಕ್ಲಾಸೊಳಗೆ ಲೇಟಾಗಿ ಎಂಟ್ರಿಕೊಟ್ಟಿದ್ದ ಆ ಹೊಸ ಹುಡುಗಿಯತ್ತಲೇ ಕಣ್ಣು ಮಿಟಿಕಿಸುತ್ತಿದ್ದರು.

ಅವರೊಟ್ಟಿಗೆ ನಾನೂ ಕೂಡ. ಅರೆರೆ! ಆ ಹೊತ್ತು ಆ ಹುಡುಗಿಯ, ರಸಬೆಡಗಿಯ ಮುಖವೇ ಕಾಣಿಸಲಿಲ್ಲ ನನಗೆ. ಕಳ್ಳ ಕಂಗಳು ನನ್ನ ಪರ್ಮೀಶನ್ ಗೂ ಕಾಯದೆ ಸೀದಾ ಅವಳ ಹವಳದ ತುಟಿಗಳ, ಬೊಗಸೆ ಕಂಗಳ ಚೆಲುವಿನ ಜೊತೆಗೆ ಬೆಸುಗೆ ಬಿದ್ದುಬಿಟ್ಟಿತ್ತು. ಮನಸ್ಸು ಮೌನ ಭಾಷೇಲೇ ಅವಳೊಟ್ಟಿಗೆ ‘ನಿಂದು ಸಕ್ಕರೆ ತುಟಿಗಳಂತೆ ಹೌದೇನೆ?’ ಅಂತ ತುಂಟ ಪ್ರಶ್ನೆಯನ್ನೂ ಎಸೆದಿತ್ತು.
ಅವಳು ಹಾಗೇ ನಗುತ್ತಾ ನಿಂತಿದ್ದಾಗ ಕೆನ್ನೆಯ ಇಕ್ಕೆಲಗಳಲ್ಲಿ ಸೃಷ್ಟಿಗೊಂಡ ಆ ಸ್ಪುರದ್ರೂಪಿ ಗುಳಿಗಳನ್ನು ದಿಟ್ಟಿಸುವಾಗಂತೂ ಅದ್ಯಾಕೋ ಎದೆಯೊಳಗೆ ಸಣ್ಣಗಿನ ಗುಡುಗು ಶುರುವಾಗಿ ಒಳಗೆ ಇದ್ದಕ್ಕಿದ್ಹಾಗೆ ಪ್ರೇಮದ ಜಡಿಮಳೆಯೂ ಸ್ಟಾರ್ಟಾಗಿಹೋಗಿತ್ತು. ಹಾಡೋಕೇ ಬಾರದ ಕಾಗೆ ಸ್ವರದ ನನಗೂ ಅವತ್ತು
‘ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ..
ನಿನ್ನ ಮುಗಿಲ ಸಾಲೆ.. ಧರೆಯ ಕೊರಳ ಪ್ರೇಮದ ಮಾಲೆ..
ಸುರಿವ ಒಲುಮೆಯಾ ಜಡಿಮಳೆಗೆ.. ಪ್ರೀತಿ ಮೂಡಿದೆ..’ ಅಂತ ಹಾಡಬೇಕೆನಿಸಿತು!ಅಬ್ಬಬ್ಬಾ.. ಎಂಥಾ ಚಂದದ ಹುಡುಗಿಯವಳು! ಅಥವಾ ಕಂಡ ಕೂಡಲೆ ನನ್ನೊಳಗೆ ಪ್ರೀತಿಯ ಮೊಗ್ಗು ಮೆಲ್ಲ ಮೆಲ್ಲಗೆ ಬಿರಿಯೋಕೆ ಶುರುವಾಗಿದ್ದಕ್ಕೇ ‘ಆ ಸಿಂಪಲ್ ಹುಡುಗಿ ನನಗೆ ಅಂದಗಾತಿ’ಯಾದಳೋ ಗೊತ್ತಿಲ್ಲ. ನಾನಂತೂ ಅವಳು ಕಣ್ಣಿಗೆ ಬಿದ್ದಾಗಿನಿಂದ ರಸಿಕರ ರಸಿಕನಾಗಿಬಿಟ್ಟಿದ್ದೆ.
ಅವಳ ಹವಳದಂಥ ಆ ಎಳೆ ತುಟಿಗಳ ಸಂದೀಲಿ ಮಕರಂದ ಹುಡುಕುವ ಮಧುಕರ ವೃತ್ತಿಗೂ ಇಳಿದಿದ್ದೆ. ಹುಡುಗಿಯರೆಂದರೆ ಸಾಕು ಉಡಾಫೆಯಾಡುತ್ತಿದ್ದ, ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದ ನಾನೂ ಲಲನೆಯರ ಕಂಗಳ ದಡದಲ್ಲಿ ಕಾಡಿಗೆಯ ಚೆಲುವನ್ನು ಆಸ್ವಾದಿಸೋದನ್ನು ಕಲಿಯುವಂತೆ, ಎಲ್ಲಿ ಭೂಮಿ ಅದುರಿ ಹೋದೀತೋ ಎಂಬ ಭೀತಿಯಲ್ಲಿ ಹೆಜ್ಜೆ ಹಾಕುವ ಹುಡುಗಿಯರ ಹೆಜ್ಜೆಗಳ, ಕಾಲ್ಗೆಜ್ಜೆಗಳ ನಿರುಮ್ಮಳ ಝೇಂಕಾರಕ್ಕೆ ಪುಳಕಗೊಳ್ಳುವಂತೆ, ಚಂಚಲೆಯರ ಆ ನಡುವಿನ ಶೃಂಗಾರ-ನಡೆಯುವ ವಯ್ಯಾರ ಸವಿಯುವಂತೆ ಮಾಡಿದ ಅವಳದ್ದು ಅದ್ಯಾಸೀಮೆಯ ಮಂತ್ರವೋ ತಿಳಿಯಲಿಲ್ಲ.
ಒಟ್ಟಿನಲ್ಲಿ ನಾನು ಆ ಕಳ್ಳರ ಕಳ್ಳ ಕೃಷ್ಣನಿಗೂ ಮಹಾನ್ ಖದೀಮ ಅನ್ನೋಹಾಗೆ ಬದಲಾಗಿಬಿಟ್ಟೆ. ಅವಳು ಕಣ್ಣಿಗೆಬಿದ್ದರೆ ಸಾಕು, ಒಂದುವಾರ ಹೊಟ್ಟೆಗೆ ಸಿಗದಿದ್ದವನು ದೂರದಲ್ಲಿರಿಸಿದ್ದ ಭಕ್ಷ್ಯಗಳನ್ನು ಕಣ್ಣಲ್ಲೇ ಮುಕ್ಕಿಬಿಡುತ್ತಾನಲ್ಲ ಹಾಗೆ ಅದ್ಯಾಕೆ ಅವಳನ್ನು ನೋಡುತ್ತ ನಿಂತುಬಿಡುತ್ತಿದ್ದೆನೋ. ನೋಡುತ್ತಾ ನಿಲ್ಲಬೇಕು ಅಂತ ಅನ್ನಿಸುತ್ತಿದ್ದಾದರೂ ಯಾಕೋ.

ಅಂತದ್ದೇನು ಕೌತುಕ ಅಡಗಿತ್ತೋ ಅವಳಲ್ಲಿ ಇವತ್ತಿಗೂ ಗೊತ್ತಿಲ್ಲ. ಆದರೆ ಒಂದಂತೂ ನಿಜ. ಅವಳೆಂದರೆ ನನಗೆ ಅದಮ್ಯ ಉತ್ಸಾಹ, ಅದೇನೋ ಪುಳಕ, ತಾಳಲಾರದ ಕುತೂಹಲ ಶುರುವಾಗಿಹೋಗಿತ್ತು!

ನೋಡೋಕೆ ಮುದ್ದು ಮರಿಯ ಹಾಗಿದ್ದ ಅವಳಿಗೆ ಅವರಿವರ ತೋಳ ತೆಕ್ಕೆಯಲ್ಲಿ ಮುಗ್ಧತೆಯ ನಗುಸೂಸೋ ಮುದ್ದು ಮಕ್ಕಳೆಂದರೆ ಇಷ್ಟ. ನನಗೆ ಮಕ್ಕಳ ಜೊತೆಗಿನ ಅವಳ ಚೆಲ್ಲಾಟ, ಆ ಸಂಭ್ರಮ ಇಷ್ಟವಾಗುತ್ತಿತ್ತು. ‘ಮಕ್ಕಳೆಂದರೆ ಅದೆಷ್ಟು ಇಷ್ಟ ಇವಳಿಗೆ. ಮದುವೆಯಾದ್ಮೇಲೆ ಡಜéನ್ಗಟ್ಟಲೆ ಮಕ್ಕಳನ್ನು ಕೈಗಿತ್ತು ಇವಳ ಗಲ್ಲ ಕೆಂಪಾಗೋದನ್ನು ನೋಡುತ್ತಾ ಛೇಡಿಸಬೇಕು.

ಮತ್ತೆ ಆ ಮುದ್ದು ಮಕ್ಕಳನ್ನು ನಾವಿಬ್ರೂ ಅಕ್ಕರೆಯಿಂದ ತಬ್ಬಿಕೊಂಡು ನಮ್ಮೀ ಪ್ರೀತಿಗೆ ಸಾಕ್ಷಿ ಹೇಳಬೇಕು’ ಅಂತ ಆಗಾಗ ಕನವರಿಯುತ್ತಿದ್ದೆ. ಮನಸೊಳಗೇ ಪಿಸುಗುಡುತ್ತಿದ್ದೆ. ಎಲ್ಲಕ್ಕಿಂತ ಮಿಗಿಲಾಗಿ ಓರೆಕೋರೆ ಅಕ್ಷರದ ನಾನೂ ಚಂದವಾಗಿ ಬರೆಯೋದನ್ನು ಕಲಿತೆ.

ಅವಳ ಹೆಸರಿನ ಜೊತೆಗೆ ನನ್ನ ಹೆಸರನ್ನು ಸಾಧ್ಯವಾದಷ್ಟು ಅಂದವಾಗಿ ಗೀಚಿ ಸುಖಿಸುವ ಮ್ಯಾಜಿಕ್ಕನ್ನೂ ಈ ಕೈಗಳಿಗೆ ಕಲಿಸಿಕೊಟ್ಟಳು ಆ ಡಿಂಪಲ್ ಹುಡುಗಿ!

ಮೊನ್ನೆ ‘ಅನ್ನಿಯನ್’ ಸಿನೆಮಾವನ್ನು ಲ್ಯಾಪ್ಟಾಪ್ ಪರದೆಯಮೇಲೆ ಹಚ್ಚಿ ಕುಳಿತಿದ್ದೆ. ‘ರಂಡಕ್ಕ.. ರಂಡಕ್ಕ ರಂಡಕ್ಕ…’ ಸಾಂಗು ಶುರುವಾಗಿತ್ತಲೇ ಮತ್ತೊಮ್ಮೆ ಎದೆಯೊಳಗೆ ಭಾವನೆಗಳು ಹುಯಿಲೆದ್ದಂತೆ ಅನ್ನಿಸತೊಡಗಿತು.

‘ಅವತ್ತು ಅವಳು ತನ್ನ ಹುಡುಗೀರ ಗ್ಯಾಂಗಿನೊಂದಿಗೆ ಹೆಜ್ಜೆಹಾಕಿದ್ದು, ಹುಡುಗನ ಹಾಗೆ ಮೀಸೆ ಲೇಪಿಸಿಕೊಂಡಿದ್ದ ಹುಡುಗಿಯ ಜೊತೆಗೆ ಕುಣಿದು ಹುಡುಗರೆಡೆಯಿಂದ ಎರ್ರಾಬಿರ್ರಿ ಶಿಳ್ಳೆ ಹೊಡೆಸಿಕೊಂಡಿದ್ದು ಇದೇ ಸಾಂಗಿಗಲ್ಲವ? ಬೆರಗುಗಣ್ಣುಗಳಿಂದ ಅವಳನ್ನೇ ದಿಟ್ಟಿಸಿ, ಮೈಮರೆತು ಶಿಳ್ಳೆ ಹೊಡೆದೋರ ಪೈಕಿ ನೀನೂ ಇದ್ದೀ ಹೌದುತಾನೆ? ಎಷ್ಟು ಚಂದ ಕಾಣುತ್ತಿದ್ದಳು.

ಆ ಎತ್ತಿಕಟ್ಟಿದ್ದ ಸ್ಯಾರಿಯ ದಿರಿಸಿನಲ್ಲಿ ಅವಳೆಷ್ಟು ಮುದ್ದಾಗಿ ಕಾಣುತ್ತಿದ್ದಳು ಅಲ್ಲವ?’ ಅಂತ ಮನಸ್ಸೆಂಬ ಮಗು ಲಲ್ಲೆ ನುಡಿಯೋಕೂ ಆರಂಭಿಸಿಬಿಟ್ಟಿತು. ಅವಳಿಗಾಗಿ ಇಂದಿಗೂ ರಚ್ಚೆ ಹಿಡಿಯುವ ನನ್ನೀ ಪೆದ್ದು ಮನಸ್ಸಿಗೆ ಆಗ ಏನೆನ್ನಬೇಕೋ ಗೊತ್ತಾಗಿರಲಿಲ್ಲ.
ಅವಳ ನೆನಪಿನೆಳೆಗಳು ಒಂದೊಂದಾಗಿ ಬಿಡಿಸಿಕೊಳ್ಳತೊಡಗಿದಾಗಂತೂ ಅವಳೇ ಎದುರು ನಿಂತು ಗುಳಿಕೆನ್ನೆಯ ಚೆಲುವಿನೊಂದಿಗೆ ತುಟಿಯರಳಿಸಿದ ಹಾಗೆ ಭ್ರಮೆಯಾಗಿ ಕಣ್ಗಳು ಮಸುಕು ಮಸುಕಾದವು. ‘ತಗೊಳ್ಳೆ ಹುಡುಗಿ.. ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣಹನಿಗಳೇ ಕಾಣಿಕೆ..’ ಅಂತ ಅವಳ ಕಣ್ಣಾಲಿಗಳನ್ನೇ ದಿಟ್ಟಿಸುತ್ತ ಒಮ್ಮೆ ಹೇಳಿಬಿಡಬೇಕೆಂದೂ ಆ ಹೊತ್ತಿನಲ್ಲನಿಸಿತು.

 ಹಾಗಾದರೆ ಅವಳು ಒಳ್ಳೆ ಡ್ಯಾನ್ಸರ್ರಾ? ಹ್ಞು ಹ್ಞುಂ.. ಅವಳು ಸ್ಟೇಜಿಗೆ ಹತ್ತಿ ಕುಣಿದದ್ದೇ ಒಂಡೆರಡುಸಾರಿ. ಅಸಲಿಗೆ ನನ್ನ ಹುಡುಗಿ ಅದ್ಭುತ ಓಟಗಾರ್ತಿ! ಬೇಕಾದರೆ ಈಗ ಏನೂ ಗೊತ್ತಿಲ್ಲವೆಂಬಂತೆ ತೆಪ್ಪಗೆ ಕುಳಿತಿರುವ ಆ ಮೈದಾನವನ್ನೇ ಕೇಳಿನೋಡಿ. ಸುಮ್ಮನೆ ಒಮ್ಮೆ ಕೆದಕಿನೋಡಿ.

ನನ್ನೊಳಗೆ ಈ ಪ್ರೀತಿಯ ಪಾರಿಜಾತ ಸಂಪೂರ್ಣವಾಗಿ ಬಿರಿದದ್ದೇ, ನಾನು ಆಕೆಯ ಆರಾಧನೆಯನ್ನು ಗಟ್ಟಿಗೊಳಿಸಿದ್ದೇ ಅದೇ 400ಮೀ. ಸುತ್ತಿನ ಮೈಯಳತೆಯ ಅದೇ ಮೈದಾನದಲ್ಲಿ ಅನ್ನೋದಕ್ಕೆ ಖಂಡಿತಾ ಸಾಕ್ಷಿ ಹೇಳೀತು. ನಮ್ಮಿಬ್ಬರ ಬರೀ ಭಾವನೆಗಳ ಪ್ರೀತಿಯನ್ನ, ವಿಭಿನ್ನ ಒಲವಿನ ಕತೆಗಳನ್ನ ಮೈದಾನ ಮೆಲ್ಲನೆ ಉರುರೋಕೆ ಶುರುವಿಟ್ಟೀತು.

ಅವಳು ಓಡಿ, ಸೋತಾಗ ಅದೆಷ್ಟು ಸಾರಿ ಸಮಾಧಾನ ಹೇಳಿದೆನೋ, ಆಕೆ ಮತ್ತೆ ಎದ್ದು ಇನ್ನೊಂದು ರೇಸಿಗೆ ರೆಡಿಯಾಗೋಹಾಗೆ ಅದೆಷ್ಟು ಸಾರಿ ಹುರಿದುಂಬಿಸಿದ್ದೆನೋ ಗೊತ್ತಿಲ್ಲ. ನಾನು ಓಡಿ ಗೆಲ್ಲೋಕೆ ಅವಳೆಷ್ಟುಬಾರಿ ಸ್ಫೂರ್ತಿಯಾದಳೋ, ಪ್ರೇರಣೆಯಾದಳೋ ಅನ್ನೋದನ್ನೂ ಲೆಕ್ಕವಿಟ್ಟಿಲ್ಲ.

ಅವಳು ದೂರವಾಗಿ  ಎರಡು ವರ್ಷಗಳು ಉರುಳಿದ್ದಾಗಿದೆ. ಅಪರೂಪಕ್ಕೊಮ್ಮೆ ಅವಳೊಂದಿಗಿನ ನನ್ನ ಚೇಷ್ಟೆಯ ಮಾತುಗಳು, ಅದಕ್ಕೆ ಪ್ರತಿಯಾಗಿ ಆಕೆಯ ನಗು-ನಸು ಮುನಿಸು, ನನಗಾಗಿ ಬಂದ ‘ಗೊಂಬೆಗಳು ತಬ್ಬಿ ಮುತ್ತಿಕ್ಕುವ’ ಅವಳ ಬರ್ತ್ ಡೇ ಗಿಫ್ಟು, ಬೆರಳೆಣಿಕೆಯ ಎಸ್ಸೆಮ್ಮೆಸ್ಸುಗಳು, ಮೂರೋ ನಾಲ್ಕೋ ಫೋನ್ಕಾಲ್ಗಳು, ಅದೇ ಮೈದಾನದಲ್ಲಿ ಕೈಲೊಂದು ಕೆಂಪು ಗುಲಾಬಿಕೊಟ್ಟು ಕೆನ್ನೆ ಕೆಂಪೇರಿಸಿಕೊಂಡು ಆಕೆ ಎದುರು ನಿಲ್ಲಲಾರದೆ ಓಡಿಹೋದ ಆ ಸವಿ ಸವಿ ನೆನಪನ್ನು ಬಿಟ್ಟರೆ ಮೌನ ಸಂಭಾಷಣೆಗಳ ಹಳೆಯ ಟೇಪ್ರೇಕಾರ್ಡರ್ ಮಾತ್ರ ಸದ್ಯ ನನ್ನ ಜೊತೆಗಿದೆ.
ಅವಳು ನೆನಪಾದಾಗೆಲ್ಲಾ  ನಾವಿಬ್ಬರೂ (ಅ)ಪರಿಚಿತರಂತೆ ಓಡಾಡಿದ ಆ ಮೈದಾನದ ಬದಿಯ ಮೆಟ್ಟಿಲುಗಳ ಮೇಲೆ ಕೂತು ಧ್ಯಾನಸ್ಥನಾಗುತ್ತೇನೆ, ಅವಳ ನೆನಪುಗಳಿಂದ ಕಚಗುಳಿ ಇರಿಸಿಕೊಳ್ಳುತ್ತೇನೆ.
ಒಮ್ಮೆಮ್ಮೆ ಎದ್ದು ನಾವಿಬ್ಬರೂ ನಡೆದಾಡಿದ ಅದೇ ಟ್ರ್ಯಾಕಿನ ಮೇಲೆ ಹೆಜ್ಜೆ ಹಾಕುತ್ತಾ ಅವಳ ಪುಟಾಣಿ ಹೆಜ್ಜೆಗಳ ಗುರುತು ಕಾಣಿಸಿತೋ ಅಂತ ಹುಡುಕಾಡುತ್ತೇನೆ.
ಹಾಗೊಂದು ವೇಳೆ ಆ ಮಣ್ಣಿನ ಮೈದಾನದಲ್ಲಿ ಅವಳ ಹೆಜ್ಜೆಗುರುತುಗಳು ಉಳಿದಿದ್ದರೆ, ಕಾಣಸಿಕ್ಕರೆ ಕೇಳಿಬಿಡಬೇಕು, ಹುಚ್ಚು ಹುಡುಗಿ, ನಾನಿಲ್ಲದೆಯೂ ಆರಾಮಾಗಿದ್ದೀಯಲ್ಲ? ನೀನಿಲ್ಲದೆ ಬದುಕುವ ಪರಿಯನ್ನು ನನಗೂ ಹೇಳಿಕೊಟ್ಟುಬಿಡು ಪ್ಲೀಸ್..
-ಸದಾ