ಇವರು ಫೋಟೋದಲ್ಲಿ ಹೇಳುವ ಕತೆ ನೂರಾರು, ಇವರೇ ಬಣ್ಣದ ಕನಸುಗಾರ ಶರತ್ ನೆಲ್ಲಿಕಾರು

ಇದು”ಬಣ್ಣದ ಕನಸುಗಾರರು” ಸರಣಿಯ ಎರಡನೆಯ ಕಂತು. ಈ ಸರಣಿಯಲ್ಲಿ ಬರುವ ನಮ್ಮ ನಡುವಿನ ಯುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು  ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ.

ಕೈಯೊಳಗೆ ಕ್ಯಾಮರಾ ಸಿಕ್ಕ ತಕ್ಷಣ ಫೊಟೊಗ್ರಾಫರ್ ಅನ್ನಿಸಿಕೊಳ್ಳಲು ಬರುವುದಿಲ್ಲ. ಅದಕ್ಕೆ ಒಂದಷ್ಟು ಅಭಿರುಚಿ, ಆಸಕ್ತಿ, ಅಧ್ಯಯನ, ಹೊಸ ನೋಟ.. ಹೀಗೆ ಕಲಿಕೆ ಬೇಕಾಗುತ್ತದೆ. ಅಂತಹ ಕ್ರಿಯೆಯಲ್ಲಿ ತೊಡಗಿಸಿಕೊಂಡು, ಛಾಯಾಗ್ರಹಣ ಕ್ಷೇತ್ರದಲ್ಲಿ ಒಂದಷ್ಟು ಕೆಲಸ ಮಾಡಿ, ಬೆಳೆಯುತ್ತಿರುವವರು ಶರತ್ ನೆಲ್ಲಿಕಾರು, ಕಾರ್ಕಳ ಸಮೀಪದ ನೆಲ್ಲಿಕಾರಿನವರು. ಪ್ರಸ್ತುತ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ದ್ವಿತೀಯ ಎಂ.ಸಿ.ಜೆ. ವಿದ್ಯಾರ್ಥಿ.

ಫೊಟೊಗ್ರಫಿ ಹೇಗಿರಬೇಕು, ನೀವು ಫೋಟೋಗಳು ಹೇಗಿರಬೇಕೆಂದು ಬಯಸುತ್ತೀರಿ ಎಂದು ಕೇಳಿದರೆ,
“ನೋಡುಗನಿಗೆ ಫೀಲ್ ಆಗುವಂತೆ, ಹೊಸ ಕಥೆಯನ್ನು ನಿರೂಪಿಸುವಂತೆ, ಒಂದು ಪ್ರಶ್ನೆಯನ್ನು ಹುಟ್ಟಿಸುವಂತೆ, ಮೌನವನ್ನೂ ತೋರಿಸುವಂತೆ ” ಎಂದು ಹೇಳುವ ಅವರ ಉತ್ತರದಲ್ಲಿ ಸೂಕ್ಷ್ಮ ಹುಡುಕಾಟ ಮತ್ತು ಸಂವೇದನೆಯ ಗುಣಗಳನ್ನು ಗುರುತಿಸಬಹುದು.

ತಿರುಗಾಟದ ಜೊತೆ ಕ್ಲಿಕ್ ಆಟ:

ಛಾಯಾಗ್ರಹಣ ಅನ್ನುವುದು ಅಗಾಧ ವಿಚಾರಗಳನ್ನೂ ಒಂದು ಫ್ರೇಮಿನಲ್ಲಿ ಕಟ್ಟಿಕೊಡುವ ಕಾರಣ ಇಷ್ಟವಾಯಿತು. ಬೇರೆ ಬೇರೆ ಜನ, ಪರಿಸರ, ತಿರುಗಾಟ ಖುಷಿ ಕೊಡುತ್ತದೆ. ಒಂದು ವಿಚಾರವನ್ನು ವಿವಿಧ ದೃಷ್ಟಿಕೋನದಿಂದ ಗಮನಿಸುವುದನ್ನು ಕಲಿಸಿ ಕೊಡುತ್ತದೆ ಎನ್ನುತ್ತಾರೆ.

 

ಇದೇ ಪ್ರಕಾರದ ಪೊಟೋಗ್ರಫಿ ಇಷ್ಟ ಅಂತೇನೂ ಇಲ್ಲ. ಆದರೆ ಸದ್ಯ ನಾನು ವಿವಿಧ ಭಾವಗಳನ್ನು ಗಮನಿಸಿ, ಗುರುತಿಸಿ ಅವುಗಳನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದೇನೆ. ಉದಾಹರಣೆಗೆ ಒಂದು ಪರಿಸರದ ಲ್ಯಾಂಡ್ ಸ್ಕೇಪ್ ನಲ್ಲಿ ಅಲ್ಲಿನ ಮರ, ಗಿಡಗಳು, ಅವುಗಳ ಸಂವಹನ, ಅಲ್ಲಿನ ಬಣ್ಣ, ಅದರ ವಿನ್ಯಾಸ ಇವುಗಳನ್ನು ಕಂಡುಕೊಳ್ಳುತ್ತೇನೆ. ಅದು ಹೇಳುವ ಭಾವಗಳನ್ನು ವಿವಿಧ ನೋಟಗಳಿಂದ ಕ್ಲಿಕ್ಕಿಸುವುದು ಇಷ್ಟ. ಮಗು ಹೊಸತನ್ನು ಬೆರಗುಗಣ್ಣಿನಿಂದ ನೋಡಿದಂತೆ, ಪ್ರತೀ ಬಾರಿಯೂ ಹೊಸತನ್ನೇ ನೋಡುತ್ತಿದ್ದೇನೆ ಅನಿಸಬೇಕು ಎಂದು ಹೇಳುತ್ತಾರೆ.

ಶರತ್ ಅವರು ಛಾಯಾಗ್ರಹಣ ಕ್ಷೇತ್ರದಲ್ಲಿ ವೆಡ್ಡಿಂಗ್ ಫೊಟೊಶೂಟ್ ಗಳಿಗೆ ಲೈಟ್ ಅಸಿಸ್ಟಂಟ್ ಆಗಿ, ಸೆಕೆಂಡ್ ಶೂಟರ್ ಆಗಿ ಕೆಲಸ ಮಾಡಿದ್ದಾರೆ. ಧರ್ಮಸ್ಥಳ ಮಹಾಮಸ್ತಕಾಭಿಷೇಕ ಮತ್ತು ಸ್ತ್ರೀ/ಹೆಣ್ಣು ಎಂಬ ವಿಷಯಗಳ ಬಗೆಗಿನ ಫೊಟೊಗ್ರಫಿ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಆ ಕೆಲಸಗಳು ಇನ್ನೂ ಆಗುತ್ತಿದೆ.

ಛಾಯಾಗ್ರಹಣದ ಆರಂಭ, ಬೆಳವಣಿಗೆ ಬಗ್ಗೆ ಮಾತನಾಡುವ ಶರತ್, ಫೊಟೊಗ್ರಫಿಯನ್ನು ಇಂಥಾ ಸಂದರ್ಭ, ಹೀಗೆಯೇ ಆರಂಭಿಸಿದೆ ಎಂದೇನೂ ಇಲ್ಲ. ಹೈಸ್ಕೂಲು, ಪದವಿಪೂರ್ವ ಶಿಕ್ಷಣದ ಸಮಯ ಕೈಲಿದ್ದ ಮೊಬೈಲ್ ಹಿಡಿದು ಮನೆಯ ಸುತ್ತಮುತ್ತ ಫೊಟೊ ತೆಗೆಯುತ್ತಿದ್ದೆ. ಅವುಗಳನ್ನು ಇನ್ನಷ್ಟು ಹೊಸ ಬಗೆಯಿಂದ ನೋಡುವ ಆಸೆಯಾಯ್ತು.

ಈ ಆಸಕ್ತಿ ಹೀಗೆ ಬೆಳೆದು ಬಂದಿದೆ. ಫೊಟೊಗ್ರಫಿಯಲ್ಲಿ ಮುಂದುವರಿಯಲು ಇದರಲ್ಲಿ ಸಿಗುವ ಖುಷಿ, ಸ್ವಾತಂತ್ರ್ಯ ಒಂದು ಕಾರಣ. ಬೇರೆ ಬೇರೆ ಛಾಯಾಗ್ರಾಹಕರ ಸಂಪರ್ಕ, ಓದು, ಹಲವು ಫೊಟೊಗಳು ನನ್ನ ಆಸಕ್ತಿ, ಕುತೂಹಲವನ್ನು ಹೆಚ್ಚಿಸಿದೆ. ಹಿಡಿದಿಟ್ಟಿದೆ. ಹಲವು ಛಾಯಾಗ್ರಾಹಕರು, ಸಾಮಾಜಿಕ ಜಾಲತಾಣಗಳು ಸ್ಪೂರ್ತಿಯಾಗಿದ್ದಾರೆ. ಮನೆಯ ಹಿರಿಯರ, ಗೆಳೆಯರ ಪ್ರೋತ್ಸಾಹ ಇದೆ‌. ಮುಂದೆ ಫೊಟೊಗ್ರಫಿಯನ್ನು ವೃತ್ತಿಯಾಗಿ ಸ್ವೀಕರಿಸುವ ಬಗ್ಗೆ ಅಷ್ಟಾಗಿ ಯೋಚನೆ ಇಲ್ಲ. ಆದರೆ ಈ ಹವ್ಯಾಸವನ್ನು ಬಿಡುವುದಿಲ್ಲ ಎನ್ನುತ್ತಾರೆ. ಶರತ್ ಅವರ ಕನಸಿಗೆ ಶುಭಕೋರಲು ಸಂಪರ್ಕ:734 942 3185

ಬರಹ : ಗಣಪತಿ ದಿವಾಣ