ನಮ್ಮ ದೇಶದಲ್ಲಿ ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳಿಗೆ ಇರುವ ತರತಮ ವ್ಯವಸ್ಥೆಯಿಂದಾಗಿ ಸಾವಿರಾರು ಕ್ರೀಡಾಳುಗಳ ಪ್ರತಿಭೆಗಳು ಬೆಳಕಿಗೆ ಬಾರದೇ ಕರುಟಿ, ಮುರುಟಿ, ಮುದುರಿ ಹೋಗುತ್ತಿರುವುದಂತು ಸತ್ಯ. ಆದರೂ ಕೆಲವೊಮ್ಮೆ ಕೆಲವು ಕ್ರೀಡಾಪಟುಗಳು ತಮ್ಮ ಅದ್ವಿತೀಯ ಸಾಧನೆ, ಪ್ರತಿಭೆ, ಪ್ರಬಲವಾದ ಇಚ್ಛಾಶಕ್ತಿಯಿಂದ ಕ್ರೀಡಾಂಬರದಲ್ಲಿ ನಕ್ಷತ್ರಗಳಂತೆ ಮಿಂಚಿ ಪ್ರಜ್ವಲಿಸುತ್ತಾರೆ. ಇನ್ನೂ ಕೆಲವರು ವನಸುಮಗಳಂತೆ ಜಗದ ಪೊಗಳಿಕೆಗೆ ಬಾಯಿ ಬಿಡದೆ ಎಲೆಯ ಮರೆಯ ಪಿಂತಿರ್ದು ತಾನಾಯಿತು ತನ್ನ ಸಾಧನೆಯಾಯ್ತು ಎಂದು ಸದ್ದಿಲ್ಲದೆ ತಮ್ಮಷ್ಟಕ್ಕೆ ತಾವೇ ಸಾಧಿಸಿಕೊಂಡು ಮುಂದುವರಿಯುತ್ತಾರೆ. ಹೀಗೆ ಪ್ರಚಾರಕ್ಕೆ ಹಾತೊರೆಯದೆ ಸಾಧನೆಯ ಶಿಖರವೇರಿದವರಲ್ಲಿ ಉಡುಪಿಯ ಶಾಲಿನಿ ರಾಜೇಶ್ ಶೆಟ್ಟಿ ಎಂಬ ದಿಟ್ಟ ಮಹಿಳೆ ಓರ್ವರು. ಶಾಲಿನಿಯವರ ಸಾಧನೆಗಳು ನಿಜಕ್ಕೂ ಅಮೋಘವಾಗಿದ್ದು ನೋಡುಗರನ್ನು ನಿಬ್ಬೆರಗಾಗುವಂತೆ ಇದೆ.
ಮೂಲತಃ ಪೆರ್ಡೂರಿನವರಾದ ಶಾಲಿನಿ ಅವರು ಉಡುಪಿಯ ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜಿನಿಂದ ಕಲಾ ವಿಭಾಗದಲ್ಲಿ ಸ್ನಾತಕ ಪದವಿಯನ್ನು ಪಡೆದವರು. ಮದುವೆಯಾದ ನಂತರದ ಹದಿನೈದು ವರ್ಷಗಳ ಕಾಲ ಅರಬ್ಬಿಸ್ತಾನದ ಬೆಹರಿನಲ್ಲಿ ನೆಲೆ ನಿಂತವರು. ಕಾಲೇಜ್ ವಿದ್ಯಾರ್ಥಿ ದೆಸೆಯಲ್ಲೇ ಅವರು ಸಾಧಿಸಿದ ಸಾಧನೆಗಳು ಅದ್ವಿತೀಯವಾಗಿವೆ. ಕರ್ನಾಟಕ ರಾಜ್ಯವನ್ನು ಅನೇಕ ಸಲ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. 1984 – 85ರಲ್ಲಿ ಅಖಿಲ ಭಾರತ ಮಟ್ಟದ ಗ್ರಾಮೀಣ ಕ್ರೀಡಾ ಸ್ಪರ್ಧೆಯಲ್ಲಿ 200 ಮೀಟರ್ ಓಟದಲ್ಲಿ ತೃತೀಯ ಸ್ಥಾನವನ್ನು ಪಡೆದವರು.
ಸಾಧನೆಯ ಯಶೋಗಾಥೆ:
ಸ್ಪರ್ಧೆಯಿಂದ ಸ್ಪರ್ಧೆಗೆ ತನ್ನ ಕ್ರೀಡಾ ಕೌಶಲ್ಯವನ್ನು ವರ್ಧಿಸುತ್ತ ಶಾಲಿನಿ ಅವರು 1986 – 87ರಲ್ಲಿ ಅಖಿಲ ಭಾರತ ಗ್ರಾಮೀಣ ಕ್ರೀಡಾಕೂಟದಲ್ಲಿ ಭರ್ಚಿ ಎಸೆತದಲ್ಲಿ ಎರಡನೆ ಹಾಗೂ ಗುಂಡೆಸತದಲ್ಲಿ ಮೂರನೆ ಸ್ಥಾನವನ್ನು ತಮ್ಮದನ್ನಾಗಿಸಿಕೊಂಡವರು. ಶಾಲಿನಿ ಅವರು ಬಾಲ್ಯದಲ್ಲಿ ಅಂತರ್ಶಾಲಾ ಹಾಗೂ ಕಾಲೇಜ್ ದಿನಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವಾರು ವೈಯುಕ್ತಿಕ ಬಹುಮಾನಗಳನ್ನು ಕೊರಳಿಗೇರಿಸಿಕೊಂಡವರು. 1988 – 89ರಲ್ಲಿ 9ನೇ ಏಷ್ಯಾನ್ ಕ್ರೀಡಾಕೂಟದ ಪ್ರಯುಕ್ತ ಬೆಂಗಳೂರಿನ ಎಸ್. ಎ. ಐ. ಕ್ರೀಡಾ ಕೇಂದ್ರಲ್ಲಿ ನಡೆದ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಗೊಂಡವರು. ಮೂರು ವರ್ಷ ಸತತವಾಗಿ ವಾಲಿಬಾಲ್ ತಂಡದಲ್ಲಿ ಮಂಗಳ ಗಂಗೋತ್ರಿ ವಿಶ್ವವಿದ್ಯಾಲಯನ್ನು ಪ್ರತಿನಿಧಿಸಿದ್ದಾರೆ.
1991 – 92ರಲ್ಲಿ ನೈರುತ್ಯ ವಲಯ ಮಟ್ಟದ ಅಂತರ್ ವಿ. ವಿ. ವಾಲಿಬಾಲ್ ಪಂದ್ಯಾಟವು ಮಂಗಳೂರಲ್ಲಿ, 1992 – 93ರಲ್ಲಿ ಕೇರಳದಲ್ಲಿ, 1993 -94ರಲ್ಲಿ ತಮಿಳುನಾಡಿನಲ್ಲಿ ನಡೆದ್ದಿದಾಗ ಶಾಲಿನಿ ಅವರು ತಂಡದ ಸದಸ್ಯರಾಗಿದ್ದರು.
1991-92ರ ಇವರಿದ್ದ ತಂಡವು ಅಂತರ್ ವಲಯ ಅಂತರ್ ವಿ. ವಿ. ಮಟ್ಟದ ವಾಲಿಬಾಲ್ ಪಂದ್ಯಾಟವು ಹಿಮಾಚಲದ ಪಾಲಂಪುರದ ಕೃಷಿ ವಿ. ವಿ. ದಲ್ಲಿ ನಡೆದಿದ್ದಾಗ ಪ್ರತಿನಿಧಿಸಿತ್ತು. 1992 – 93ರಲ್ಲಿ ಕೊಲ್ಕತ್ತದಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರೀಯ ಮಟ್ಟದ ಹಿರಿಯರ ವಾಲಿಬಾಲ್ ಪಂದ್ಯಾಟದಲ್ಲಿ ತಂಡದ ಭಾಗವಾಗಿದ್ದರು. 1993 – 94ರಲ್ಲಿ ಆಂಧ್ರದಲ್ಲಿ ನಡೆದಿದ್ದ ಮಹಿಳಾ ವಾಲಿಬಾಲ್ ಪಂದ್ಯಾಟದಲ್ಲಿ ತಂಡದ ಪ್ರತಿನಿಧಿಯಾಗಿದ್ದರು.
2000 ರಿಂದ 2015ರ ವರೆಗೆ ಬೆಹರಿನಿನಿಂದ ಶಾಲಿನಿ ಅವರು ಪುನರಪಿ ತಾಯ್ನೆಲಕ್ಕೆ ಬಂದರು. 2016ರಿಂದ ವೈಯುಕ್ತಿಕ ಸಾಧನೆಯನ್ನು ಮುಂದುವರಿಸಿ ಹತ್ತು ಹಲವು ಅಮೋಘ ವಿಜಯಗಳನ್ನು ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. 2016ರಲ್ಲಿ ಶ್ರೀಲಂಕಾ ಮಾಸ್ಟರ್ಸ್ ಇನ್ವಿಟೇಶನ್ ಇಂಟರ್ ನ್ಯಾಶನಲ್ ಅಥ್ಲೀಟ್ ಕ್ರೀಡಾಕೊಟದಲ್ಲಿ ಭರ್ಚಿ ಎಸೆತ ಹಾಗೂ ಗುಂಡೆಸೆತದಲ್ಲಿ ಪ್ರಥಮ, ಎತ್ತರ ಜಿಗಿತ ಹಾಗೂ ಚಕ್ರ (ಡಿಸ್ಕಸ್) ಎಸೆತದಲ್ಲಿ ದ್ವಿತೀಯ ಸ್ಥಾನಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡವರು.
2016ರಲ್ಲಿ ಮೈಸೂರಿನಲ್ಲಿ ಸಂಯೋಜಿಸಲಾಗಿದ್ದ 37ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕ್ರೀಡಾಕೂಡದಲ್ಲಿ ಗುಂಡೆಸೆತದಲ್ಲಿ ಪ್ರಥಮ, ಎತ್ತರ ಜಿಗಿತ ಹಾಗೂ ಭರ್ಚಿ ಎಸೆತದಲ್ಲಿ ತೃತೀಯ ಸ್ಥಾನವನ್ನು ಪಡೆದವರು. 2016ರಲ್ಲಿ ಸಿಂಗಾಪುರದಲ್ಲಿ ನಡೆಯಲ್ಪಟ್ಟಿದ್ದ 19ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಗುಂಡೆಸೆತ ಹಾಗೂ ಭರ್ಚಿ ಎಸೆತಗಳಲ್ಲಿ ದ್ವಿತೀಯ ಸ್ಥಾನವನ್ನು ತಮ್ಮದನ್ನಾಗಿಸಿಕೊಂಡವರು. 2016ರಲ್ಲಿ ಪರ್ತ್, ಆಸ್ಟ್ರೇಲಿಯದಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭರ್ಚಿ ಎಸೆತ (32.32 ಮೀ) ದಲ್ಲಿ ತೃತೀಯ ಹಾಗೂ ಗುಂಡೆಸತ (9.61 ಮೀ) ದಲ್ಲಿ ಆರನೇ ಸ್ಥಾನವನ್ನು ಗಳಿಸಿದವರು.
2017ರಲ್ಲಿ ರೂಗವೊ, ಚೀನಾದಲ್ಲಿ ಸಂಯೋಜಿಸಲಾಗಿದ್ದ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭರ್ಚಿ ಎಸೆತ (33.07 ಮೀ) ದಲ್ಲಿ ಪ್ರಥಮ, ಗುಂಡೆಸೆತ (9.17 ಮೀ) ದಲ್ಲಿ ತೃತೀಯ ಸ್ಥಾನವನ್ನು ದಕ್ಕಿಸಿಕೊಂಡವರು. 2018ರಲ್ಲಿ ಗೋವಾ ರಾಜ್ಯದಲ್ಲಿ ಆಯೋಜನೆಗೊಂಡಿದ್ದ ಅಖಿಲ ಭಾರತ Masters Ranking ಬ್ಯಾಡ್ಮಿಂಟನ್ ಕ್ರೀಡಾಕೂಟಲ್ಲಿ ಮಿಕ್ಸೆಡ್ ಡಬಲ್ಸ್ (45 ವರ್ಷ ವಿಭಾಗ) ನಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾದವರು. 2019ರಲ್ಲಿ ತಮಿಳುನಾಡಿನಲ್ಲಿ ನಡೆಯಲ್ಪಟ್ಟ ಅಖಿಲ ಭಾರತ Master Ranking ಬ್ಯಾಡ್ಮಿಂಟನ್ ಮಹಿಳಾ ಜತೆಯಾಟ (45 ವರ್ಷ ವಿಭಾಗ) ದಲ್ಲಿ ಪ್ರಥಮ ಸ್ಥಾನ ಪಡೆದು ವಿಜಯಿಯಾದವರು. 2019ರಲ್ಲಿ ಪೋಲೆಂಡಿನಲ್ಲಿ ನಡೆದ ಜಾಗತಿಕ ಹಿರಿಯ ಚಾಂಪಿಯನ್ಶಿಪ್ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್ ಇದರಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2019 -2021ರ ಸಾಲಿಗೆ ಕರ್ನಾಟಕ ರಾಜ್ಯ ತಂಡದ ಪ್ರಬಂಧಕರಾಗಿ ಆಯ್ಕೆಗೊಂಡಿದ್ದಾರೆ.
2000 – 2015 ಪರ್ಯಂತ ವಿಲಾಯತಿನಲ್ಲಿ ಇದ್ದಾಗಲೂ ಶಾಲಿನಿಯವರು ತಮ್ಮ ಸಾಧನೆಯ ಹಾದಿಗೆ ರಿಯಾಯತಿ ತೋರಿಸಿದವರಲ್ಲ. ತಮ್ಮೆಲ್ಲ ಸಮಯವನ್ನು ಕಲಿಯುವುದಕ್ಕೆ ಮತ್ತು ಕಲಿಸುವುದಕ್ಕೆ ಮೀಸಲಿಟ್ಟವರು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಇವುಗಳ ಸಹಭಾಗಿತ್ವದಲ್ಲಿ ಪ್ರಮಾಣಿತಗೊಂಡಿರುವ ಬೆಹರಿನಿನ ತರಬೇತು ಸಂಸ್ಥೆಯಿಂದ ಪ್ರಥಮ ದರ್ಜೆ “ಕ್ರಿಕೆಟ್ ಕೋಚಿಂಗ್” ತರಬೇತಿ ಪಡೆದವರು.
ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನಿಂದ ಪ್ರಮಾಣಿತಗೊಂಡಿರುವ ಇಂಡಿಯನ್ ಕ್ಲಬ್ ಬೆಹರಿನ್ ಇಲ್ಲಿಂದ ಪ್ರಥಮ ದರ್ಜೆ “ಬ್ಯಾಡ್ಮಿಂಟನ್ ಅಂಪೈರಿಂಗ್” ತರಬೇತಿ ಪಡೆದವರು. 2000 ದಿಂದ 2015ರ ವರೆಗೆ “ಅಲ್ ನೂರ್ ಅಂತರರಾಷ್ಟ್ರೀಯ ಶಾಲೆ, ಕಿಂಗ್ಡಂಮ್ ಆಫ್ ಬೆಹರಿನ್ ಇಲ್ಲಿ ಹಿರಿಯ ದೈಹಿಕ ಶಿಕ್ಷಕರಾಗಿ ದುಡಿದ ಅನುಭವಿ.
2016ರಿಂದ ವಿಲಾಯತನ್ನು ಬಿಟ್ಟು ಮಗಳ ವಿದ್ಯಾಭ್ಯಾಸದ ಸಲುವಾಗಿ ಉಡುಪಿಯಲ್ಲಿ ನೆಲೆಸಿರುವ ಶಾಲಿನಿ ಶೆಟ್ಟಿ ಅವರು “ಯುನೈಟೆಡ್ ಆಥ್ಲೇಟಿಸ್” ಎಂಬ ಸ್ವಯಂ ಸಂಸ್ಥೆಯ ಮೂಲಕ ನೂರಾರು ಕ್ರೀಡಾಭಿಲಾಷಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಇವರ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಹಲವಾರು ಉದಯೋನ್ಮುಖ ಕ್ರೀಡಾಪಟುಗಳು ಉನ್ನತ ಮಟ್ಟದ ಸಾಧನೆಗಳನ್ನು ಸಾಧಿಸಿದ್ದಾರೆ. ಅವರುಗಳಲ್ಲಿ ಕೆಲವರನ್ನು ಹೆಸರಿಸಲೇ ಬೇಕಾಗುತ್ತದೆ. ಸನಿಕಾ ಬಂಗೇರ, ಅನುರಾಗ್, ಪ್ರವೇಶ್ ರಾವ್, ಅನ್ವಿತಾ ಕೊಡವೂರು, ಪ್ರಜ್ವಲ್ ಎಂ. ಶೆಟ್ಟಿ, ನಿಧಿ ಎಂ. ಶೆಟ್ಟಿ, ಹಾಗೂ ಓಂಕಾರ್ ಕಾಮತ್ ಮುಂತಾದವರು. ಇವರೆಲ್ಲ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹತ್ತು ಹಲವು ಪದಕಗಳಿಗೆ ಕೊರಳೊಡ್ಡಿದವರು.
ಶಾಲಿನಿ ರಾಜೇಶ್ ಶೆಟ್ಟಿ ಅವರ ಗುರುತರ ಸಾಧನೆಗಳು ಕ್ರೀಡೆಗೆ ಸಂಬಂಧಿಸಿದ ಹಲವು ಅಧಿಕೃತ ಸಂಸ್ಥೆಗಳಿಂದ ದೃಢಿಕರಿಸಲ್ಪಟ್ಟಿವೆ. ವಿಶ್ವವಿದ್ಯಾಲಯದ YMCA ಕಾಲೇಜ್ ಆಫ್ ಪಿಸಿಕಲ್ ಎಜುಕೇಷನ್, ಕ್ಯಾಂಬ್ರಿಡ್ಜ್ ಇಂಟರ್ ನ್ಯಾಷನಲ್ ಡಿಪ್ಲೋಮಾ ಫಾರ್ ಟೀಚರ್ಸ್ ಆ್ಯಂಡ್ ಟ್ರೈನರ್ಸ್ ಹಾಗೂ ಸ್ಪೋಟ್ಸ್ ಆಥಾರಿಟಿ ಆಫ್ ಇಂಡಿಯಾ ಈ ಸಂಸ್ಥೆಗಳಿಂದ ದೃಢೀಕರಣಗೊಂಡಿವೆ.
118 ದೇಶಗಳು ಭಾಗವಹಿಸಿದ ಪರ್ತ್ (2016) ಕ್ರೀಡಾಕೂಟದಲ್ಲಿ ಪದಕಗಳಿಸಿದ್ದಕ್ಕಾಗಿ ಕ್ರೀಡಾ ಮಂತ್ರಿ ಶ್ರೀ ವಿಜಯ ಗೋಯೆಲ್ ಅವರಿಂದ ಸನ್ಮಾನಿಸಲ್ಪಟ್ಟಿದ್ದಾರೆ. ಸಿಂಗಾಪುರದಲ್ಲಿ (2016) ಪಡೆದ ಎರಡು ಬೆಳ್ಳಿ ಪದಕಗಳಿಗಾಗಿ ಬೆಹರಿನ್ ಬಂಟ್ಸ್ ಸಂಘದಿಂದ ಸನ್ಮಾನಿತರಾಗಿದ್ದಾರೆ. ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಉಡುಪಿ ಇವರಿಂದ ಪರ್ತ್ ಕ್ರೀಡಾಕೂಟದ ವಿಜಯಕ್ಕಾಗಿ ಅಭಿನಂದಿಸಲ್ಪಟ್ಟಿದ್ದಾರೆ. ಹೀಗೆ ಹತ್ತಾರು ಕ್ರೀಡಾ ಸಂಸ್ಥೆಗಳಿಂದ ಸನ್ಮಾನಗಳನ್ನು ಪಡೆವರು ಶಾಲಿನಿ ಶೆಟ್ಟಿ.
ಶಾಲಿನಿ ಅವರ ವೈಯುಕ್ತಿಕ ಸಾಧನೆಗಳು ಅವರ ಶಿಷ್ಯರ ಸಾಧನೆಗಳು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ. ಅವರುಗಳಿಗೆ ಕೀರ್ತಿ ಯಶಸ್ಸು ಲಭಿಸಲಿ ಎಂದು ನಮ್ಮ ಹಾರೈಕೆ. (ಸಂಪರ್ಕ : 9731737199)
» ಉದಯ ಬಿ. ಶೆಟ್ಟಿ, ಪಂಜಿಮಾರು