ಶೇಕ್ಸ್‌ಪಿಯರ್ ನಾಟಕಗಳಲ್ಲಿ ನೈತಿಕತೆ ಮತ್ತು ರಾಜಕೀಯ ನೈಜ ಜಗತ್ತಿನ ಚಿತ್ರಣವಿದೆ: ಪ್ರೊ.ಎನ್. ಮನು ಚಕ್ರವರ್ತಿ

ಮಣಿಪಾಲ: ಶೇಕ್ಸ್‌ಪಿಯರ್ ತನ್ನ ದುರಂತ ನಾಟಕಗಳಲ್ಲಿ ತನ್ನ ಕಾಲದ ಸಾಮಾಜಿಕ ಜೀವನದಲ್ಲಿ ನೈತಿಕತೆ ಹೇಗೆ ಕ್ರಮೇಣ ಮಾಯವಾಗ ತೊಡಗಿತು ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದಾನೆ. ನೈತಿಕತೆ ಮತ್ತು ರಾಜಕೀಯ ನೈಜ ಜಗತ್ತಿನಲ್ಲಿ ಎರಡು ಪ್ರತ್ಯೇಕ ಭಾಗಗಳು ಎಂದು ಅವನು ಚಿತ್ರಿಸಿದ್ದಾನೆ ಎಂದು ಖ್ಯಾತ ಸಂಸ್ಕೃತಿ ವಿಮರ್ಶಕ ಪ್ರೊ.ಎನ್. ಮನು ಚಕ್ರವರ್ತಿ ಹೇಳಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ ಆಯೋಜಿಸಿದ್ದ “ಶೇಕ್ಸ್‌ಪಿಯರ್ ಜಗತ್ತು” ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಶೇಕ್ಸ್‌ಪಿಯರ್ ತನ್ನ ನಾಟಕಗಳಲ್ಲಿ ಒಳಸಂಚುಗಳು, ವಿಶ್ವಾಸ ಘಾತುಕತನ ಮತ್ತು ದ್ರೋಹಗಳಿಂದ ಒಳಗೊಂಡ ರಾಜಕೀಯ ಜಗತ್ತನ್ನು ಸೃಷ್ಟಿಸುತ್ತಾನೆ. ಅವನು ಪ್ರಜಾಪ್ರಭುತ್ವದ ಉದಯದ ಮುನ್ಸೂಚನೆಯ ಜೊತೆಗೆ ಅಹಿಂಸಾತ್ಮಕ ಪರ್ಯಾಯ ವಿಶ್ವ ದೃಷ್ಟಿಕೋನವನ್ನು ಬೆಂಬಲಿಸುತ್ತಾನೆ. ಒಂದರ್ಥದಲ್ಲಿ ಶೇಕ್ಸ್‌ಪಿಯರ್ ದುರಂತ ನಾಟಕಗಳ ಜಗತ್ತು ಮತ್ತು ಮಹಾಭಾರತದ ಕಥಾನಕವನ್ನು ಹೋಲಿಸಬಹುದು ಎಂದು ಹೇಳಿದರು.

ಶೇಕ್ಸ್‌ಪಿಯರ್ ನ ದುರಂತಗಳಲ್ಲಿ ಬ್ರೂಟಸ್ ಅತಿ ತಪ್ಪಾಗಿ ಅರ್ಥೈಸಲ್ಪಟ್ಟ ಪಾತ್ರ ಎಂದು ವಾದಿಸುತ್ತಾ ಶೇಕ್ಸ್‌ಪಿಯರ್ ಸಮಕಾಲೀನ ಸಂದರ್ಭಕ್ಕೆ ಇತಿಹಾಸದಿಂದ ತಿಳುವಳಿಕೆಯನ್ನು ಎರವಲು ಪಡೆಯುತ್ತಿದ್ದನು. ಶೇಕ್ಸ್‌ಪಿಯರ್ ತನ್ನ ಸಾನೆಟ್‌ಗಳಲ್ಲಿ ಹಳೆ ತಲೆಮಾರಿನ ಆಸ್ಥಾನ ಕವಿಗಳಿಗೆ ಪ್ರತಿಕ್ರಿಯಿಸುತ್ತಾ, ಕಾವ್ಯದ ಭಾಷೆಯನ್ನೇ ನವೀಕರಿಸುತ್ತ ಹೋಗುತ್ತಾನೆ ಎಂದು ಪ್ರೊ.ಚಕ್ರವರ್ತಿ ಹೇಳಿದರು.

ಆಲಿಸ್ ಚೌಹಾಣ್, ವೆಲಿಕ, ಚಿನ್ಮಯಿ ಬಾಲ್ಕರ್, ಆಕರ್ಷಿಕಾ ಸಿಂಗ್, ಸಾತ್ವಿಕ್ ಜೋಶಿ, ಶ್ರವಣ್ ಬಾಸ್ರಿ, ಶೇಕ್ಸ್‌ಪಿಯರ್‌ನ ಹಾಸ್ಯ ನಾಟಕಗಳ ಮೇಲೆ ಪ್ರಬಂಧಗಳನ್ನು ಮಂಡಿಸಿದರು.