ಕನಸಿಗೆ ರೆಕ್ಕೆ ಕಟ್ಟಿ ಆಕಾಶಕ್ಕೆ ಹಾರಿದ ಶೈನಿ ಅಸ್ಮಾ ಸಲ್ಡಾನ, ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಎನ್ನುವ ಹೆಗ್ಗಳಿಕೆ

ಕಾರ್ಕಳ: ಐದು ವರ್ಷದ ಬಾಲಕಿಯ ಮನದಲ್ಲಿ ಮೂಡಿದ್ದ ಪೈಲಟ್ ಆಗಬೇಕೆಂಬ ಕನಸು, ವರ್ಷಗಳ ಕಠಿಣ ಪರಿಶ್ರಮ, ಛಲ ಮತ್ತು ತಾಳ್ಮೆಯ ಮೂಲಕ ನನಸಾಗಿದೆ. ಕಾರ್ಕಳ ತಾಲೂಕಿನ ಕೌಡೂರು ರಂಗನಪಲ್ಕೆಯ ಶೈನಿ ಅಸ್ಮಾ ಸಲ್ಡಾನ ಅವರು ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್‌ (CPL) ಪಡೆಯುವ ಮೂಲಕ ಉಡುಪಿ ಜಿಲ್ಲೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೌಡೂರು ರಂಗನಪಲ್ಕೆಯ ಅಶೋಕ್ ಜಾಕೋಬ್ ಸಲ್ಡಾನ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನ ದಂಪತಿಯ ಪುತ್ರಿಯಾಗಿರುವ ಶೈನಿ ಅಸ್ಮಾ ಅವರು ಕಾರ್ಕಳದ ಕ್ರೈಸ್ಟ್‌ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಬಾಲ್ಯದಿಂದಲೇ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದ ಅವರು, ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಪೈಲಟ್ ತರಬೇತಿಗೆ ಅಗತ್ಯವಾದ ಪರೀಕ್ಷೆಗಳನ್ನು ಎದುರಿಸಿದರು.

ಕಠಿಣ ಆಯ್ಕೆ ಪ್ರಕ್ರಿಯೆ

ಬೆಂಗಳೂರಿನಲ್ಲಿ ನಡೆದ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯ ಪ್ರವೇಶ ಪರೀಕ್ಷೆಯಲ್ಲಿ ದೇಶದಾದ್ಯಂತ ಐದು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಸುಮಾರು 125 ಮಂದಿ ಆಯ್ಕೆಯಾಗಿದ್ದು, ಕಠಿಣ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶೈನಿ ಅವರು 2023ರ ಆಗಸ್ಟ್‌ನಿಂದ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯಲ್ಲಿ ಪೈಲಟ್ ತರಬೇತಿ ಪಡೆದರು.

ಬಾಲ್ಯದ ಘಟನೆ ಪ್ರೇರಣೆ

ಶೈನಿ ಅಸ್ಮಾ ಅವರಿಗೆ ಪೈಲಟ್ ಆಗಬೇಕೆಂಬ ಕನಸು ಐದು ವರ್ಷದ ಬಾಲ್ಯದಲ್ಲೇ ಮೂಡಿತ್ತು. ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೂರಾರು ಮಂದಿ ಮೃತಪಟ್ಟ ಘಟನೆ ಅವರ ಬಾಲ್ಯದ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತ್ತು. ಆ ಸಂದರ್ಭದಲ್ಲಿ ವಿಮಾನ ಹಾಗೂ ಪೈಲಟ್ ವೃತ್ತಿಯ ಬಗ್ಗೆ ಮೂಡಿದ ಕುತೂಹಲವೇ ಮುಂದೆ ಜೀವನದ ಗುರಿಯಾಗಿ ಪರಿವರ್ತನೆಯಾಯಿತು.

“ನಾನು ಐದು ವರ್ಷದವಳಿದ್ದಾಗ ಮಂಗಳೂರಿನಲ್ಲಿ ವಿಮಾನ ಅಪಘಾತ ಸಂಭವಿಸಿ ನೂರಾರು ಮಂದಿ ಮೃತಪಟ್ಟಿದ್ದರು. ಆ ಘಟನೆ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಆಗಲೇ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದೆ. ಹಲವು ವರ್ಷಗಳ ಬಳಿಕ ಇಂದು ಆ ಕನಸು ನನಸಾಗಿದೆ” ಎಂದು ಶೈನಿ ಅಸ್ಮಾ ತಮ್ಮ ಸಾಧನೆಯ ಹಿಂದಿನ ಪ್ರೇರಣೆಯನ್ನು ಹಂಚಿಕೊಂಡಿದ್ದಾರೆ.

ಪರಿಶ್ರಮದಿಂದ ಸಾಧನೆ

ಪೈಲಟ್ ತರಬೇತಿ ಸುಲಭದ ಹಾದಿಯಾಗಿರಲಿಲ್ಲ. ಸತತ ಪರಿಶ್ರಮ, ಶಿಸ್ತು, ತಾಂತ್ರಿಕ ಜ್ಞಾನ ಹಾಗೂ ಮಾನಸಿಕ ಸಿದ್ಧತೆಯೊಂದಿಗೆ ತರಬೇತಿ ಪೂರ್ಣಗೊಳಿಸಿದ ಅವರು, ವಿಮಾನ ಹಾರಾಟದ ಕೌಶಲ್ಯ, ಸುರಕ್ಷತಾ ಕ್ರಮಗಳು ಮತ್ತು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ತರಬೇತಿಯನ್ನು ಪಡೆದಿದ್ದಾರೆ. ಹಾರಾಟದ ಅಭ್ಯಾಸ ಪೂರ್ಣಗೊಳಿಸಿರುವ ಅವರು, ಡಿಜಿಸಿಎಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸುತ್ತಿದ್ದಾರೆ.

ತಮ್ಮ ಸಾಧನೆಯ ಹಿಂದೆ ತಂದೆ-ತಾಯಿಯ ಪ್ರೋತ್ಸಾಹ ಮತ್ತು ಬೆಂಬಲವೇ ಪ್ರಮುಖ ಶಕ್ತಿಯಾಗಿತ್ತು ಎಂದು ಶೈನಿ ಹೇಳಿದ್ದಾರೆ.

“ನನ್ನ ತಂದೆ ಅಶೋಕ್ ಸಲ್ಡಾನ ಮತ್ತು ತಾಯಿ ಮರಿಯಾ ಗ್ರೆಟ್ಟಾ ಸಲ್ಡಾನ ಅವರೇ ನನ್ನ ಸ್ಫೂರ್ತಿ. ನಾನು ಬಾಲ್ಯದಲ್ಲಿ ಕಂಡ ಕನಸನ್ನು ಗುರಿಯಾಗಿಸಿಕೊಂಡು ಮುನ್ನಡೆಯಲು ತಂದೆಯ ಪ್ರೇರಣೆ ಪ್ರಮುಖ ಕಾರಣ. ಪೋಷಕರ ಬೆಂಬಲವಿಲ್ಲದೆ ಈ ಹಾದಿ ಸುಲಭವಾಗುತ್ತಿರಲಿಲ್ಲ” ಎಂದು ಅವರು ತಿಳಿಸಿದ್ದಾರೆ.

ಹೆಣ್ಣುಮಕ್ಕಳಿಗೆ ಶೈನಿ ಸಂದೇಶ

ಉಡುಪಿ ಜಿಲ್ಲೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶೈನಿ, ಸಾಧನೆಗೆ ಯಾವುದೇ ಶಾರ್ಟ್‌ಕಟ್ ಇಲ್ಲ ಎಂಬುದನ್ನು ತಮ್ಮ ಅನುಭವದ ಮೂಲಕ ಸಾರಿದ್ದಾರೆ.

“ಕಠಿಣ ಪರಿಶ್ರಮ ಮಾಡಿ, ತಾಳ್ಮೆಯಿಂದ ಕೆಲಸ ಮಾಡಿದರೆ ಫಲ ಸಿಕ್ಕೇ ಸಿಗುತ್ತದೆ. ಯಾವುದೇ ಗುರಿ ಸಾಧಿಸಲು ಛಲ, ತಾಳ್ಮೆ ಮತ್ತು ಶ್ರದ್ಧೆ ಅತ್ಯಗತ್ಯ” ಎಂಬುದು ಅವರ ಸಂದೇಶ.

ವೈಮಾನಿಕ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ತುಸು ಕಡಿಮೆಯಿದ್ದರೂ, ಹೆಣ್ಣುಮಕ್ಕಳು ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಮುನ್ನಡೆಯಬೇಕು ಎಂದು ಶೈನಿ ಹೇಳಿದ್ದಾರೆ. ಸವಾಲುಗಳು ಎದುರಾದಾಗ ಹಿಂದೆ ಸರಿಯದೆ ಗುರಿಯತ್ತ ದೃಢ ಹೆಜ್ಜೆ ಇಡಬೇಕು. ಶಿಕ್ಷಣದ ಬಳಿಕ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನಿರಂತರ ಪರಿಶ್ರಮಪಟ್ಟರೆ ಯಶಸ್ಸು ಖಚಿತ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.