ಶಾರುಖ್​ ಖಾನ್​​ರ ‘ಜವಾನ್​’ ಸಿನಿಮಾ..ಬಾಕ್ಸ್​ ಆಫೀಸ್​ನಲ್ಲಿ 8 ದಾಖಲೆ

ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡ ಚಿತ್ರ ಕಲೆಕ್ಷನ್​ ವಿಚಾರದಲ್ಲಿ ಅಬ್ಬರದ ಓಟ ಮುಂದುವರೆಸಿದೆ. ಶಾರುಖ್​ ಸೇರಿದಂತೆ ನಯನತಾರಾ, ವಿಜಯ್​ ಸೇತುಪತಿ ಅವರಿಗೂ ‘ಜವಾನ್​’ ಉತ್ತಮ ಹೆಸರು ತಂದುಕೊಟ್ಟಿದೆ. ಬಿಡುಗಡೆಯಾದ ಐದೇ ದಿನಗಳಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಜವಾನ್​ ದೇಶೀಯವಾಗಿ ಮತ್ತು ಜಾಗತಿಕವಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಅವುಗಳು ಹೀಗಿವೆ..ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಮತ್ತು ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಕಾಂಬೋದಲ್ಲಿ ಮೂಡಿಬಂದ ‘ಜವಾನ್’​ ಸಿನಿಮಾ ಸೆಪ್ಟೆಂಬರ್​ ​ 7, ಗುರುವಾರದಂದು ಬಿಡುಗಡೆಯಾಗಿ ವಿಶ್ವದಾದ್ಯಂತ ಧೂಳೆಬ್ಬಿಸುತ್ತಿದೆ.

ಕಿಂಗ್​ ಖಾನ್​ ಅವರ ಹೈ ಆಕ್ಷನ್​ ಚಿತ್ರ ‘ಜವಾನ್’​ ಬಿಡುಗಡೆಯಾದ ಮೊದಲ ದಿನ ವಿಶ್ವದಾದ್ಯಂತ 129.6 ಕೋಟಿ ರೂಪಾಯಿ ಮತ್ತು ಭಾರತದಲ್ಲಿ 75 ಕೋಟಿ ರೂಪಾಯಿ ಗಳಿಸಿತು. ಚಿತ್ರ ತಯಾರಕರ ಪ್ರಕಾರ, ಎಸ್​ಆರ್​ಕೆ ವೃತ್ತಿಜೀವನದಲ್ಲಿ ಜಾಗತಿಕವಾಗಿ ಮತ್ತು ಭಾರತದಲ್ಲಿ ಭರ್ಜರಿ ಓಪನಿಂಗ್​ ಪಡೆದ ಮೊದಲ ಹಿಂದಿ ಚಿತ್ರ ಜವಾನ್​ ಆಗಿದೆ.

ಬಿಡುಗಡೆಯಾದ ಮೂರು ದಿನದಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದ ದಾಖಲೆ ಕೂಡ ‘ಜವಾನ್​’ ಹೆಸರಿನಲ್ಲಿದೆ. ಪಠಾಣ್​ ಈ ಮೊತ್ತವನ್ನು ಗಳಿಸಲು ನಾಲ್ಕು ದಿನ ತೆಗೆದುಕೊಂಡಿದ್ದರೆ, ಗದರ್​ 2 5 ದಿನಗಳಲ್ಲಿ ಸಾಧಿಸಿತು.

ಜವಾನ್​ ಹಿಂದಿ ಚಿತ್ರರಂಗದ ಅತಿದೊಡ್ಡ ಓಪನಿಂಗ್​ ಪಡೆದುಕೊಂಡ ಚಿತ್ರವಾಗಿದೆ. ಪಠಾಣ್​ ಅನ್ನು ಹಿಂದಿಕ್ಕಿ ವಿಶ್ವದಾದ್ಯಂತ ಮೊದಲ ದಿನ 129.6 ಕೋಟಿ ರೂ. ಗಳಿಸಿದೆ. ಇದು ಜಾಗತಿಕವಾಗಿ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿ ದೊಡ್ಡ ಆರಂಭವಾಗಿದೆ.

ದೇಶೀಯ ಗಲ್ಲಾಪೆಟ್ಟಿಯಲ್ಲಿ ಪ್ರಾಬಲ್ಯ ಸಾಧಿಸುವುದು ಮಾತ್ರವಲ್ಲದೇ, ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಅತ್ಯಂತ ವೇಗವಾಗಿ 500 ಕೋಟಿ ರೂಪಾಯಿ ಗಳಿಸಿದ ಬಾಲಿವುಡ್​ ಚಿತ್ರವಾಗಿ ‘ಜವಾನ್​’ ಹೊರಹೊಮ್ಮಿದೆ. ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಜವಾನ್​ ವಿಶ್ವದಾದ್ಯಂತ ಸುಮಾರು 530 ಕೋಟಿ ರೂಪಾಯಿ ಗಳಿಸಿದೆ. ಶಾರುಖ್​ ಖಾನ್​ ಅವರ ಪಠಾಣ್​ ಚಿತ್ರ 500 ಕೋಟಿ ರೂಪಾಯಿ ಗಡಿ ದಾಟಲು ಐದು ದಿನಗಳನ್ನು ತೆಗೆದುಕೊಂಡಿತ್ತು.
ಜವಾನ್​ ಸಿನಿಮಾ ತನ್ನ ಯಶಸ್ಸಿನ ಪ್ರಯಾಣದಲ್ಲಿ ಮತ್ತೊಂದು ದಾಖಲೆಯನ್ನು ಬರೆದಿದೆ. ಚಿತ್ರವು ತನ್ನ ಮೊದಲ ವಾರಾಂತ್ಯದಲ್ಲಿ 180 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಸಿನಿಮಾ ಬಿಡುಗಡೆಯ ಇತಿಹಾಸದಲ್ಲಿ ಇದು ಹಿಂದೆಂದೂ ಸಂಭವಿಸಿಲ್ಲ.

ಜವಾನ್ ಸಿನಿಮಾ ಶನಿವಾರದಂದು ಮತ್ತೊಂದು ದಾಖಲೆಯನ್ನು ಬರೆಯಿತು. ಬಿಡುಗಡೆಯಾಗಿ 3ನೇ ದಿನ ​74 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಇದಕ್ಕೂ ಮೊದಲು ವಾರಾಂತ್ಯವಾದ ಶನಿವಾರದಂದು ಯಾವ ಸಿನಿಮಾವೂ ಇಷ್ಟೊಂದು ಮೊತ್ತ ಗಳಿಸಿಲ್ಲ. ಜವಾನ್​ ಸಿನಿಮಾವೇ ಈ ಹೊಸ ಇತಿಹಾಸವನ್ನು ಸೃಷ್ಟಿಸಿತು.

ನಾಲ್ಕನೇ ದಿನವಾದ ಆದಿತ್ಯವಾರ, ಹಿಂದಿ ಚಲನಚಿತ್ರ ಇತಿಹಾಸದಲ್ಲಿ ಒಂದೇ ದಿನ ಅತಿ ಹೆಚ್ಚು ಗಳಿಕೆ ಕಂಡ ದಾಖಲೆಯನ್ನು ಜವಾನ್​ ಸೃಷ್ಟಿಸಿತು. ಈವರೆಗಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿ, ಭಾರತದಲ್ಲಿ ಅಂದಾಜು 80 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತು. ಹಿಂದಿ ಚಿತ್ರರಂಗದಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಮೊತ್ತ ಸಂಪಾದಿಸಿದ ಮೊದಲ ಚಿತ್ರ ಇದಾಗಿದೆ.

ಒಂದೇ ವರ್ಷದಲ್ಲಿ 500 ಕೋಟಿ ಕ್ಲಬ್​ ಸೇರಿದ ಎರಡು ಚಿತ್ರಗಳು (ಪಠಾಣ್​ ಮತ್ತು ಜವಾನ್​) ಎಂಬ ಹೆಗ್ಗಳಿಕೆ ಶಾರುಖ್​ ಖಾನ್​ ಅವರಿಗೆ ಸಿಕ್ಕಿದೆ. ಈ ಒಂದು ಪಟ್ಟವನ್ನು ಅಲಂಕರಿಸಿದ ಏಕೈಕ ನಟ ಕಿಂಗ್​ ಖಾನ್​ ಆಗಿದ್ದಾರೆ. ಈ ಮೂಲಕ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದ್ದಾರೆ.