ಮಂಗಳೂರು: ಇಂಟರ್ನ್ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಂಗಳೂರಿನ ಖ್ಯಾತ ವಕೀಲ K.S.N.ರಾಜೇಶ್ ಭಟ್ ವಿರುದ್ಧ ಕೇಸ್ ದಾಖಲಾಗಿದೆ.
ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಎಲ್ಎಲ್ಬಿ ವಿದ್ಯಾರ್ಥಿನಿ ದೂರು ಆಧರಿಸಿ ನಿನ್ನೆ ರಾತ್ರಿ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ವಕೀಲರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ಬಯಲಾಗುತ್ತಿದ್ದಂತೆ ವಕೀಲ ರಾಜೇಶ್ ಭಟ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಮಂಗಳೂರು ಎಸಿಬಿ, ಲೋಕಾಯುಕ್ತಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ರಾಜೇಶ್ ಭಟ್, ನಗರದ ಪ್ರಸಿದ್ಧ ಬ್ಯಾಂಕ್ಗಳು ಸೇರಿ ಹಲವು ಕಂಪನಿಗಳಿಗೆ ಲೀಗಲ್ ಅಡ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜೇಶ್ ಕಚೇರಿಗೆ ವಿದ್ಯಾರ್ಥಿನಿ ಇಂಟರ್ನ್ಶಿಪ್ಗೆ ಬರುತ್ತಿದ್ದರು. ಸಂತ್ರಸ್ತ ಯುವತಿ ರಾಜೇಶ್ ವಿರುದ್ಧ ನಿನ್ನೆ(ಅಕ್ಟೋಬರ್ 18) ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ FIR ದಾಖಲಿಸಲಾಗಿದೆ.
ಆಡಿಯೋ ವೈರಲ್:
ಸಂತ್ರಸ್ತೆ ಮತ್ತು ವಕೀಲ ಮಾತನಾಡಿದ್ದಾರೆ ಎನ್ನಲಾಗಿರುವ 11 ನಿಮಿಷ 55 ಸೆಕೆಂಡ್ಸ್ ಇರುವ ಆಡಿಯೋ ವೈರಲ್ ಆಗಿದೆ. ರಾಜೇಶ್ ಭಟ್, ‘‘ನಾನು ತಪ್ಪು ಮಾಡಿದ್ದೇನೆ, ಕ್ಷಮಿಸಿ ಬಿಡು’’ ಎಂದು ಬೇಡಿಕೊಳ್ಳುವ ಆಡಿಯೋ ಕಳೆದ ಒಂದು ವಾರದಿಂದ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರ್ಗೆ ಎಬಿವಿಪಿ ದೂರು ನೀಡಿತ್ತು. ಆಡಿಯೋ ಆಧರಿಸಿ ವಕೀಲರ ವಿರುದ್ಧ ಕ್ರಮಕ್ಕೆ ಮಂಗಳೂರು ಎಬಿವಿಪಿ ಘಟಕ ಆಗ್ರಹಿಸಿತ್ತು.
‘ನನ್ನ ಜೀವದಲ್ಲಿ ಒಂದೇ ಒಂದು ಬಾರಿ ತಪ್ಪು ಮಾಡಿದ್ದೇನೆ. ನನ್ನ ತಪ್ಪು ಕ್ಷಮಿಸಿ ಇಂಟರ್ನ್ಶಿಪ್ಗೆ ದಯವಿಟ್ಟು ನೀನು ಮೊದಲಿನಂತೆ ನಮ್ಮ ಕಚೇರಿಗೆ ಬಾ. ಸಂಜೆ 6 ಗಂಟೆ ಬಳಿಕ ಕಚೇರಿಯಲ್ಲಿ ಕೆಲಸ ಮಾಡಬೇಡ’ ಎಂದು ಸಂತ್ರಸ್ತ ವಿದ್ಯಾರ್ಥಿನಿಗೆ ವಕೀಲ ರಾಜೇಶ್ ಭಟ್ ಕೋರಿಕೊಂಡಿರುವುದು ಆಡಿಯೋದಲ್ಲಿ ದಾಖಲಾಗಿದೆ. ‘ನೀವು ರೇಪಿಸ್ಟ್ಗಿಂತ ಕಡಿಮೆ ಇಲ್ಲ. ನಾನು ಕಚೇರಿಗೆ ಬರಲ್ಲ, ನಿಮ್ಮ ಮುಖ ನೋಡೋಕೆ ಇಷ್ಟವಿಲ್ಲ’ ಎಂದು ಸಂತ್ರಸ್ತ ಯುವತಿ ಪ್ರತಿಕ್ರಿಯೆ ನೀಡಿದ್ದಾರೆ.
ಎರಡೂ ಕೈಮುಗಿದು ಬೇಡಿಕೊಳ್ಳುತ್ತೇನೆ ದಯವಿಟ್ಟು ಕ್ಷಮಿಸಿ, ಮತ್ತೆ ಇಂಟರ್ನ್ಶಿಪ್ಗೆ ಬಾ’ ಎಂದು ರಾಜೇಶ್ ಭಟ್ ಹೇಳಿದಾಗ, ‘ಕಚೇರಿಗೆ ಬಂದ್ರೆ ಕಚೇರಿಯಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಡಿಲೀಟ್ ಮಾಡುತ್ತೀರಾ?’ ಎಂದು ಸಂತ್ರಸ್ತೆ ಕೇಳಿದ್ದಾರೆ. ‘2 ಹೆಣ್ಣು ಮಕ್ಕಳ ತಂದೆ ಆಗಿರುವ ನೀವು ಈ ರೀತಿ ಮಾಡಿದ್ದು ತಪ್ಪು. ನನಗೆ ಇನ್ಮುಂದೆ ಫೋನ್ ಮಾಡಬೇಡಿ’ ಎಂದು ಖಡಕ್ ಎಚ್ಚರಿಕೆ ನೀಡಿ ಸಂತ್ರಸ್ತೆ ಫೋನ್ ಕಟ್ ಮಾಡಿರುವುದು ಆಡಿಯೋದಲ್ಲಿ ದಾಖಲಾಗಿದೆ. ಸಂತ್ರಸ್ತೆ ಜತೆ ಮಾತಾಡುತ್ತಾ ಕಣ್ಣೀರಿಟ್ಟಿರುವ ರಾಜೇಶ್ ಭಟ್, ಪರಿಪರಿಯಾಗಿ ಕ್ಷಮಿಸು ಎಂದು ಬೇಡಿಕೊಂಡಿರುವುದೂ ದಾಖಲಾಗಿದೆ.