ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡಿದರೆ ಕಾದಿದೆ ಕಠಿಣ ಶಿಕ್ಷೆ:ಪೊಲೀಸ್ ಮಹಾನಿರ್ದೇಶಕರ ಹೊಸ ಆದೇಶದಲ್ಲೇನಿದೆ?

ಬೆಂಗಳೂರು: ಬೇರೆಯವರ ಖಾಸಗಿ ಫೋಟೋಗಳು ಹಾಗೂ ವಿಡಿಯೋಗಳನ್ನು ಅವರ ಅನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡುವುದು ಅಥವಾ ವೈರಲ್ ಮಾಡುವವರ ವಿರುದ್ಧ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾ ನಿರೀಕ್ಷಕ (ಡಿಜಿ-ಐಜಿಪಿ) ಡಾ. ಎಂ.ಎ. ಸಲೀಂ ಮಹತ್ವದ ಆದೇಶ ಹೊರಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಖಾಸಗಿ ದೃಶ್ಯಗಳನ್ನು ದುರುಪಯೋಗಪಡಿಸಿಕೊಂಡು ಬ್ಲಾಕ್‌ಮೇಲ್, ಸೆಕ್ಸ್ಟೋರ್ಷನ್, ಬೆದರಿಕೆ ಹಾಗೂ ಪ್ರತೀಕಾರದ ಉದ್ದೇಶದಿಂದ ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ವಿಸ್ತೃತ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಮಾರ್ಗಸೂಚಿಯಲ್ಲಿ, ಒಬ್ಬ ವ್ಯಕ್ತಿ ಖಾಸಗಿ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೆ ಎಂದ ಮಾತ್ರಕ್ಕೆ ಅದನ್ನು ಸಾರ್ವಜನಿಕವಾಗಿ ಹಂಚಿಕೆ ಮಾಡಲು ಅಥವಾ ಪ್ರಸಾರ ಮಾಡಲು ಸಹ ಒಪ್ಪಿಗೆ ನೀಡಿದ್ದಾರೆ ಎಂದು ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆ ಮತ್ತು ಪ್ರಸಾರಕ್ಕೆ ನೀಡುವ ಒಪ್ಪಿಗೆ ಎರಡು ವಿಭಿನ್ನ ಸಂಗತಿಗಳಾಗಿದ್ದು, ಅನುಮತಿ ಇಲ್ಲದೆ ಹಂಚಿಕೆ ಮಾಡುವುದು ಕಾನೂನುಬದ್ಧ ಅಪರಾಧವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಖಾಸಗಿ ಚಿತ್ರಗಳು ಅಥವಾ ವಿಡಿಯೋಗಳ ಮೂಲಕ ಹಣ, ಲೈಂಗಿಕ ಅನುಕೂಲ ಅಥವಾ ಇತರೆ ಲಾಭಕ್ಕಾಗಿ ಬೆದರಿಕೆ ಹಾಕುವುದು, ಸುಲಿಗೆ ನಡೆಸುವುದು ಕಂಡುಬಂದರೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)-2023ರ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಸಂಬಂಧಿತ ವಿಧಿಗಳ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯವೂ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್ 77ರ ಅಡಿಯಲ್ಲಿ ಗೌಪ್ಯತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಬೇಕಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 66(ಇ), 67 ಹಾಗೂ 67(ಎ)ಗಳನ್ನು ಅನ್ವಯಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಮಹಿಳಾ ಸಂತ್ರಸ್ತೆಯರ ಪ್ರಕರಣಗಳಲ್ಲಿ ಈ ವಿಧಿಗಳನ್ನು ಸೇರಿಸಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಲಾಗಿದೆ.

ಬ್ಲಾಕ್‌ಮೇಲ್ ವಿಡಿಯೋಗಳು, ಸೆಕ್ಸ್ಟೋರ್ಷನ್ ಹಾಗೂ ರಿವೆಂಜ್ ಪೋರ್ನೋಗ್ರಫಿ ಪ್ರಕರಣಗಳಲ್ಲಿ ಯಾವುದೇ ವಿಳಂಬವಿಲ್ಲದೆ ತಕ್ಷಣ ಪ್ರಕರಣ ದಾಖಲಿಸಬೇಕು. ಅಪರಾಧವು ಬೇರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದರೂ ಝೀರೋ ಎಫ್‌ಐಆರ್ ದಾಖಲಿಸಿ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು ಎಂದು ಸೂಚಿಸಲಾಗಿದೆ.

ಇಂತಹ ಪ್ರಕರಣಗಳಲ್ಲಿ ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಮತ್ತು ಗೌಪ್ಯವಾಗಿ ಸಂರಕ್ಷಿಸಬೇಕು. ಪೀಡಿತರ ಗುರುತು ಯಾವುದೇ ಕಾರಣಕ್ಕೂ ಬಹಿರಂಗವಾಗದಂತೆ ನೋಡಿಕೊಳ್ಳಬೇಕು. ಮಹಿಳಾ ಸಂತ್ರಸ್ತೆಯರ ದೂರುಗಳನ್ನು ಮಹಿಳಾ ಅಧಿಕಾರಿಗಳೇ ದಾಖಲಿಸಬೇಕು ಹಾಗೂ ದೂರುದಾರರೊಂದಿಗೆ ಸೂಕ್ಷ್ಮವಾಗಿ ಮತ್ತು ಗೌರವಯುತವಾಗಿ ವರ್ತಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅಪರಾಧಕ್ಕೆ ಸಂಬಂಧಿಸಿದ ವಿಷಯವನ್ನು ತಕ್ಷಣವೇ ಸಾಮಾಜಿಕ ಜಾಲತಾಣಗಳು ಅಥವಾ ಸಂಬಂಧಿತ ಸಂಸ್ಥೆಗಳಿಂದ ತೆಗೆದುಹಾಕಲು ಐಟಿ ನಿಯಮಗಳ ಪ್ರಕಾರ ನೋಟಿಸ್ ನೀಡಬೇಕು. ತನಿಖಾಧಿಕಾರಿಗಳು ಸೈಬರ್ ಕ್ರೈಂ ಘಟಕಗಳೊಂದಿಗೆ ಸಮನ್ವಯ ಸಾಧಿಸಿ ತಾಂತ್ರಿಕ ತನಿಖೆ ಮತ್ತು ಫೋರೆನ್ಸಿಕ್ ವಿಶ್ಲೇಷಣೆ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೂರು ದಾಖಲಿಸಲು ನಿರಾಕರಿಸುವುದು, ಅನಗತ್ಯ ವಿಳಂಬ ಮಾಡುವುದು ಅಥವಾ “ಚಿತ್ರೀಕರಣಕ್ಕೆ ಮೊದಲೇ ಒಪ್ಪಿಗೆ ನೀಡಿದ್ದರು” ಎಂಬ ಕಾರಣ ನೀಡಿ ಎಫ್‌ಐಆರ್ ದಾಖಲಿಸದೇ ಇರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಕಠಿಣ ಎಚ್ಚರಿಕೆ ನೀಡಿದ್ದಾರೆ.