ಸುರತ್ಕಲ್: ಅಕ್ಟೋಬರ್ 18 ರಂದು ಟೋಲ್ ಗೇಟ್ ವಿರೋಧಿ ಸಮಿತಿಯಿಂದ ಕರೆಯಲಾಗಿದ್ದ ಪ್ರತಿಭಟನೆಯ ಕಾವು ಜೋರಾಗಿದ್ದು, ಹಲವರ ಬಂಧನವಾಗಿದೆ. ಪ್ರತಿಭಟನಾಕಾರರು ಟೋಲ್ ಗೇಟ್ ಮುತ್ತಿಗೆ ತಡೆಯಲು ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ದಾಟಿ ಟೋಲ್ ಗೆ ಮುತ್ತಿಗೆ ಹಾಕಿದ್ದಾರೆ. ಕಾಂಗ್ರೆಸ್ ನಾಯಕ ಮಿಥುನ್ ರೈ ಟೋಲ್ ಗೇಟ್ ಮೇಲೆ ಹತ್ತಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸಲು ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಪ್ರತಿಭಟನೆಯಲ್ಲಿ ನಿರತರಾಗಿದ್ದ ಮಾಜಿ ವಿಧಾನ್ ಪರಿಷತ್ ಸದಸ್ಯ ಐವನ್ ಡಿಸೋಜಾ, ಮುನೀರ್ ಕಾಟಿಪಳ್ಳ, ಇಮ್ತಿಯಾಝ್, ಸುನೀಲ್ ಕುಮಾರ್ ಬಜಾಲ್, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ದಿನೇಶ್ ಉಳ್ಳೆಪಾಡಿ ಮತ್ತಿತರರನ್ನು ಬಂಧಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಪೊಲೀಸರು, ನಾಗರಿಕ ಸಿಬ್ಬಂದಿ, ಸಿಎಆರ್, ಕೆಎಸ್‌ಆರ್‌ಪಿ ಪೊಲೀಸರನ್ನು ಪ್ರತಿಭಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ.