ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು, ಸಮಸ್ಯೆಯ ಬಗೆಹರಿಸಲು ಸಮಿತಿಯೊಂದನ್ನು ರಚಿಸಿ ಮಂಗಳವಾರ ಆದೇಶ ನೀಡಿದೆ.
ಈ ಮೂಲಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ 48 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ.
ಕೃಷಿ ಮಸೂದೆ ಕುರಿತು ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ಕುರಿತು ವಿಚಾರಣೆ ನಡೆಸಿರುವ ಕೋರ್ಟ್, ಯಾವುದೇ ಶಕ್ತಿಗೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ.
ಈಗಿರುವ ಸಮಸ್ಯೆಯನ್ನು ನಾವು ಇತ್ಯರ್ಥಪಡಿಸಲೇಬೇಕಾಗಿದೆ. ಅದ್ದರಿಂದ ನಾವು ಸಮಿತಿಯೊಂದನ್ನು ರಚನೆ ಮಾಡುತ್ತಿದ್ದೇವೆ. ಸಮಿತಿಯಲ್ಲಿ ಕಾಯ್ದೆ ಕುರಿತ ಸಾಧಕ ಹಾಗೂ ಬಾಧಕಗಳ ಕುರಿತು ಚರ್ಚೆ ನಡೆಸುತ್ತೇವೆ. ರೈತರು ಈ ಕುರಿತಾಗಿ ನಮ್ಮೊಂದಿಗೆ ಸಹಕಾರ ನೀಡಬೇಕೆಂದು ಮುಖ್ಯ ನ್ಯಾಯಾಮೂರ್ತಿಗಳು ಹೇಳಿದ್ದಾರೆ.
ಶಾಸನವನ್ನು ಅಮಾನತುಗೊಳಿಸುವ ಮತ್ತು ಸಮಿತಿಯನ್ನು ರಚನೆ ಮಾಡುವ ಅಧಿಕಾರ ನಮಗಿದೆ. ಸಮಿತಿಯು ನಮಗಾಗಿಯೇ ಆಗಿರುತ್ತದೆ. ನಮ್ಮೊಂದಿಗೆ ಸಹಕಾರ ನೀಡಬೇಕು. ಸಮಿತಿಯು ಯಾವುದೇ ಆದೇಶ ನೀಡುವುದಿಲ್ಲ. ಶಿಕ್ಷೆಯನ್ನು ನೀಡುವುದಿಲ್ಲ. ಕಾಯ್ದೆ ಕುರಿತ ಸಾಧಕ, ಬಾಧಕಗಳನ್ನು ಪರಿಶೀಲಿಸಿ ಸಮಿತಿ ವರದಿ ಸಲ್ಲಿಸಲಿದೆ ಎಂದು ಮುಖ್ಯ ನ್ಯಾಯಾಮೂರ್ತಿಗಳು ಹೇಳಿದ್ದಾರೆ.












