ಕಡಿಯಾಳಿ ಕ್ಷೇತ್ರದಿಂದ ಸಮಾಜ ಸೇವೆಯೆ ದೇವರ ಸೇವೆ ಅಭಿಯಾನ

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಮೇ 26 ಗುರುವಾರದಂದು ಸಾಯಂಕಾಲ 5.00 ಗಂಟೆಗೆ ಉಡುಪಿ-ಕಲ್ಸಂಕ ಸರ್ಕಲ್ ನಲ್ಲಿ ದೇವಳದ ಪ್ರಚಾರದ ಕೊಡೆ ಬಿಡುಗಡೆ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ನಡೆಯಲಿದೆ.

ಉಡುಪಿಯ ಖ್ಯಾತ ಸಮಾಜಸೇವಕರಾದ ಡಾ ಪಿ.ವಿ. ಭಂಡಾರಿ, ರವಿ ಕಟಪಾಡಿ, ವಿಶು ಕುಮಾರ್ ಶೆಟ್ಟಿ ಅಂಬಲಪಾಡಿ, ನೀತಾ ಪ್ರಭು ಕಾಪು, ನಿತ್ಯಾನಂದ ಒಳಕಾಡು, ಶ್ರೀಮತಿ ಪೃಥ್ವಿ ಪೈ, ಈಶ್ವರ್ ಮಲ್ಪೆ ಮುಂತಾದವರ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.

ದೇವಳದ ಬ್ರಹ್ಮ ಕಲಶೋತ್ಸವದ ಪ್ರಚಾರ ನಡೆಸಲಿರುವ ಕೊಡೆಯನ್ನು ಉಡುಪಿ ಜಿಲ್ಲೆಯಾದ್ಯಂತ ಜೂನ್ 10ರವರೆಗೆ ಕಟ್ಟಲಾಗುವುದು. ದೇವಳದ ಬ್ರಹ್ಮ ಕಲಶೋತ್ಸವ ಕಾರ್ಯ ಮುಗಿದ ಬಳಿಕ ಈ ಕೊಡೆಯನ್ನು ಸಮಾಜದ ಬಡ-ಬಗ್ಗರಿಗೆ ದಾನ ನೀಡಲಾಗುವುದು. ಈ ರೀತಿ ‘ಸಮಾಜ ಸೇವೆಯೆ ದೇವರ ಸೇವೆ’ ಅಭಿಯಾನದಂತಹ ವಿಶಿಷ್ಟ ಕಲ್ಪನೆಯನ್ನು ಶ್ರೀ ಕ್ಷೇತ್ರದಿಂದ ನಡೆಸಲಾಗುತ್ತಿದ್ದು ಭಕ್ತಾದಿಗಳೆಲ್ಲರೂ ಈ ಕಾರ್ಯಕ್ರಮಕ್ಕೆ ತಪ್ಪದೆ ಆಗಮಿಸಬೇಕಾಗಿ ದೇವಳದ ಆಡಳಿತ ಮಂಡಳಿ ವಿನಂತಿ ಮಾಡಿದೆ.

ಐದು ಗಂಟೆಗೆ ಕಲ್ಸಂಕದಿಂದ ಹೊರಟು ಮೆರವಣಿಗೆ ಮೂಲಕ ಕಡಿಯಾಳಿಗೆ ಆಗಮಿಸಲಾಗುವುದು ಎಂದು ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ
ತಿಳಿಸಿದ್ದಾರೆ.