ರಾಜ್ಯದ ಸಿಹಿ ತಿನಿಸುಗಳ ಮಳಿಗೆಗಳಲ್ಲಿ ಗಂಭೀರ ಲೋಪ:10 ಉದ್ಯಮಿಗಳಿಗೆ ನೋಟಿಸ್!

ಬೆಂಗಳೂರು: ಕರ್ನಾಟಕದಾದ್ಯಂತ ಸಿಹಿ ತಿನಿಸುಗಳ ತಯಾರಿಕಾ ಘಟಕಗಳು ಹಾಗೂ ಮಾರಾಟ ಮಳಿಗೆಗಳಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಡೆಸಿದ ವಿಶೇಷ ತಪಾಸಣೆಯಲ್ಲಿ ಹಲವು ಲೋಪಗಳು ಪತ್ತೆಯಾಗಿವೆ. ನಿಯಮ ಉಲ್ಲಂಘಿಸಿದ 10 ಆಹಾರ ಉದ್ಯಮಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಸೂಚನೆಯಂತೆ ಒಟ್ಟು 80 ಸಿಹಿ ತಿನಿಸುಗಳ ತಯಾರಿಕಾ ಘಟಕಗಳು ಹಾಗೂ ಮಾರಾಟ ಮಳಿಗೆಗಳಲ್ಲಿ ತಪಾಸಣೆ ನಡೆಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ತಪಾಸಣೆ ವೇಳೆ ಒಟ್ಟು 125 ಆಹಾರ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟ ಪರಿಶೀಲನೆಗಾಗಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಕೆಲವು ಘಟಕಗಳಲ್ಲಿ ಆಹಾರ ತಯಾರಿಕೆಯಲ್ಲಿ ತೊಡಗಿರುವ ಸಿಬ್ಬಂದಿ ವೈದ್ಯಕೀಯ ಪ್ರಮಾಣಪತ್ರ ಹೊಂದಿರದಿರುವುದು ಹಾಗೂ ಎಫ್‌ಎಸ್‌ಎಸ್‌ಎಐ (FSSAI) ಕಡ್ಡಾಯ ಪರವಾನಗಿ ಅಥವಾ ನೋಂದಣಿ ಪಡೆಯದಿರುವುದು ಬೆಳಕಿಗೆ ಬಂದಿದೆ.

ನಿಯಮ ಉಲ್ಲಂಘಿಸಿದ ಉದ್ಯಮಿಗಳ ವಿರುದ್ಧ ಸಂಬಂಧಪಟ್ಟ ಕಾನೂನುಗಳ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ. ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸದ ತಯಾರಿಕಾ ಘಟಕಗಳು ಮತ್ತು ಮಾರಾಟ ಮಳಿಗೆಗಳ ಮೇಲೆ ಮುಂದಿನ ದಿನಗಳಲ್ಲೂ ತಪಾಸಣೆ ಮುಂದುವರಿಯಲಿದ್ದು, ಲೋಪಗಳು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.