ಮಂಗಳೂರು: ಹೊರ ರಾಜ್ಯಗಳಿಂದ ಮಂಗಳೂರಿಗೆ ಬೃಹತ್ ಲಾರಿಗಳ ಮೂಲಕ ಆಗಮಿಸುವ ಮೀನುಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಹಳೆಬಂದರಿನ ಒಂದು ಪಾರ್ಶ್ವದಲ್ಲಿ ಶನಿವಾರದಿಂದ ಅವಕಾಶ ನೀಡಲಾಗುವುದು. ಆದರೆ ಇಲ್ಲಿಗೆ ಸಾರ್ವಜನಿಕ ಪ್ರವೇಶ ಇಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಹಳೆಬಂದರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಹೊರರಾಜ್ಯಗಳ ಸುಮಾರು 25ರಷ್ಟು ಬೃಹತ್ ಲಾರಿಗಳು ಮೀನುಗಳ ಸಮೇತ ಮಂಗಳೂರಿಗೆ ಆಗಮಿಸುತ್ತಿವೆ. ಆದರೆ ಸದ್ಯ ಅವರಿಗೆ ಸೂಕ್ತ ಸ್ಥಳಾವಕಾಶವಿರಲಿಲ್ಲ. ಹೀಗಾಗಿ ಹಳೆ ಬಂದರಿನಲ್ಲಿ ಶನಿವಾರ ರಾತ್ರಿಯಿಂದ ಚಿಲ್ಲರೆ ಮಾರಾಟಗಾರರಿಗೆ ಮೀನು ಅನ್ಲೋಡ್ ಮಾಡಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮುಂಜಾನೆ 3 ಗಂಟೆಯಿಂದ ಬೆಳಗ್ಗೆ 8 ಗಂಟೆಯ ಒಳಗೆ ಈ ಪ್ರಕ್ರಿಯೆ ನಡೆಯಬೇಕು . ಟೆಂಪೋದಲ್ಲಿ ಬರುವ ಸಣ್ಣ ವ್ಯಾಪಾರಸ್ಥರಿಗೆ ಮಾತ್ರ ಇಲ್ಲಿಗೆ ಪ್ರವೇಶವಿದ್ದು ಸಾರ್ವಜನಿಕರಿಗೆ ಪ್ರವೇಶವಿಲ್ಲ ಸಾಮಾಜಿಕ ಅಂತರ ಪಾಲಿಸಿಕೊಂಡು ಮಾರಾಟಗಾರರು ಇಲ್ಲಿಂದ ಮೀನು ಖರೀದಿಸಿ ತೆರಳಬೇಕು ಎಂದರು.
ಆ ಬಳಿಕ ಸೆಂಟ್ರಲ್ ಮಾರುಕಟ್ಟೆ ಪುರಭವನದ ಬದಿ, ಹಳೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಶಾಸಕರ ತಂಡ ತರಕಾರಿ, ಹಣ್ಣು ಮಾರಾಟ ಮಾಡುವವರಿಗೆ ಆಗಬೇಕಾದ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿತು.