ಸೆನ್ಸೆಕ್ಸ್​ 308 & ನಿಫ್ಟಿ 89 ಅಂಕ ಕುಸಿತ: ಹಣದುಬ್ಬರ ಹೆಚ್ಚಳ

ಮುಂಬೈ: ಬಿಎಸ್‌ಇ ಬೆಂಚ್​ ಮಾರ್ಕ್​ ಸೆನ್ಸೆಕ್ಸ್ 307.63 ಪಾಯಿಂಟ್ಸ್ ಅಥವಾ ಶೇಕಡಾ 0.47 ರಷ್ಟು ಕುಸಿದು 65,688.18 ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 89.45 ಪಾಯಿಂಟ್ಸ್ ಅಥವಾ ಶೇಕಡಾ 0.46 ರಷ್ಟು ಕುಸಿದು 19,543.10 ಕ್ಕೆ ತಲುಪಿದೆ.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಹಣಕಾಸು ನೀತಿ ಸಮಿತಿಯು ಪ್ರಮುಖ ಬಡ್ಡಿ ದರಗಳನ್ನು ಶೇಕಡಾ 6.50 ಕ್ಕೆ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡ ನಂತರ ದೇಶೀಯ ಶೇರು ಮಾರುಕಟ್ಟೆಗಳು ಗುರುವಾರ ಕುಸಿದವು.
ಇಂದಿನ ಶೇರು ಮಾರುಕಟ್ಟೆ ವಹಿವಾಟಿನಲ್ಲಿ ಸೆನ್ಸೆಕ್ಸ್​ 308 ಅಂಕ ಮತ್ತು ನಿಫ್ಟಿ 89 ಅಂಕ ಕುಸಿತ ಕಂಡಿವೆ.

ಇಂದು ಆರ್​ಬಿಐನ ದ್ವೈಮಾಸಿಕ ನೀತಿಯನ್ನು ಪ್ರಕಟಿಸಿ ಮಾತನಾಡಿದ ಗವರ್ನರ್ ಶಕ್ತಿಕಾಂತ್ ದಾಸ್, ಮೇ 2023 ರಲ್ಲಿ ಶೇಕಡಾ 4.3 ಕ್ಕೆ ಇಳಿದಿದ್ದ ಮುಖ್ಯ ಹಣದುಬ್ಬರವು ಜೂನ್​​ನಲ್ಲಿ ಏರಿಕೆಯಾಗಿದೆ ಮತ್ತು ತರಕಾರಿ ಬೆಲೆಗಳ ಕಾರಣದಿಂದ ಜುಲೈ ಮತ್ತು ಆಗಸ್ಟ್​​ನಲ್ಲಿ ಹಣದುಬ್ಬರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು. ತರಕಾರಿ ಬೆಲೆ ಹೆಚ್ಚಳದಿಂದಾಗಿ ಆರ್​ಬಿಐ 2023-24 ಹಣಕಾಸು ವರ್ಷದ ಸಿಪಿಐ ಹಣದುಬ್ಬರ ಮುನ್ಸೂಚನೆಯನ್ನು ಶೇಕಡಾ 5.1 ರಿಂದ ಶೇಕಡಾ 5.4 ಕ್ಕೆ ಹೆಚ್ಚಿಸಿದೆ, ಆದರೆ ಜಿಡಿಪಿ ಮುನ್ಸೂಚನೆಯನ್ನು ಶೇಕಡಾ 6.5ರಲ್ಲಿ ಉಳಿಸಿಕೊಂಡಿದೆ.
ಏತನ್ಮಧ್ಯೆ, ಸೋನಿ ಇಂಡಿಯಾದೊಂದಿಗೆ ಕಂಪನಿಯನ್ನು ವಿಲೀನಗೊಳಿಸಲು ಎನ್​ಸಿಎಲ್​ಟಿ ಅನುಮೋದನೆ ನೀಡಿದ ನಂತರ ಮತ್ತು ಎಲ್ಲ ಆಕ್ಷೇಪಣೆಗಳನ್ನು ತಳ್ಳಿಹಾಕಿದ ನಂತರ ಜೀ ಎಂಟರ್​ಟೈನ್​​ಮೆಂಟ್​​ ಶೇರುಗಳ ಲಾಭದಿಂದಾಗಿ ನಿಫ್ಟಿ ಮೀಡಿಯಾ ಶೇಕಡಾ 6.63 ರಷ್ಟು ಏರಿಕೆಯಾಗಿದೆ. ಜೀ ಷೇರು ಇಂದು ಶೇಕಡಾ 20 ರಷ್ಟು ಏರಿಕೆಯಾಗಿತ್ತು. ಆದರೆ ಎನ್‌ಎಸ್‌ಇಯಲ್ಲಿ ಶೇಕಡಾ 16.18 ರಷ್ಟು ಕುಸಿದು 281 ರೂ.ಗೆ ತಲುಪಿದೆ.

ನಿಫ್ಟಿ ಸ್ಮಾಲ್ ಕ್ಯಾಪ್-50 ಶೇಕಡಾ 0.52, ನಿಫ್ಟಿ ಸ್ಮಾಲ್ ಕ್ಯಾಪ್-250 ಶೇಕಡಾ 0.25, ನಿಫ್ಟಿ 100 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 0.47 ಮತ್ತು ನಿಫ್ಟಿ 200 ಶೇಕಡಾ 0.41 ರಷ್ಟು ಕುಸಿದಿವೆ. ಅದಾನಿ ಎಂಟರ್​ ಪ್ರೈಸಸ್, ಅದಾನಿ ಪೋರ್ಟ್ಸ್, ಇಂಡಸ್‌ಇಂಡ್ ಬ್ಯಾಂಕ್, ಟೈಟನ್, ಒಎನ್​ಜಿಸಿ, ಜೆಎಸ್​ಡಬ್ಲ್ಯೂ ಸ್ಟೀಲ್, ಎಂ &ಎಂ, ಬಿಪಿಸಿಎಲ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಪವರ್ ಗ್ರಿಡ್, ರಿಲಯನ್ಸ್, ಬಜಾಜ್ ಫಿನ್​ಸರ್ವ್​ ಮತ್ತು ದಿವಿಸ್ ಲ್ಯಾಬ್ ಇಂದು ಹೆಚ್ಚು ಲಾಭ ಗಳಿಸಿದ ಶೇರುಗಳಾಗಿವೆ.

ಏಷ್ಯನ್ ಪೇಂಟ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬ್ರಿಟಾನಿಯಾ, ಐಟಿಸಿ, ನೆಸ್ಲೆ ಇಂಡಿಯಾ, ಅಪೊಲೊ ಆಸ್ಪತ್ರೆ, ಟಾಟಾ ಕನ್ಸೂಮರ್ಸ್, ಎಸ್​ಬಿಐ ಲೈಫ್, ಆಕ್ಸಿಸ್ ಬ್ಯಾಂಕ್, ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ನಷ್ಟ ಅನುಭವಿಸಿದ ಪ್ರಮುಖ ಶೇರುಗಳಾಗಿವೆ.ಆರ್​ಬಿಐ ಹಣದುಬ್ಬರದ ಮುನ್ಸೂಚನೆಯನ್ನು ಹೆಚ್ಚಿಸಿದ ನಂತರ ಮತ್ತು ಮುಂದಿನ ದಿನಗಳಲ್ಲಿ ನಗದು ಹರಿವನ್ನು ಬಿಗಿಗೊಳಿಸಲು ನಗದು ಮೀಸಲು ಅನುಪಾತ (ಸಿಆರ್​ಆರ್​) ಅಡಿಯಲ್ಲಿ ಠೇವಣಿಗಳ ಹೆಚ್ಚಿನ ಭಾಗವನ್ನು ಮೀಸಲಿಡುವಂತೆ ಬ್ಯಾಂಕುಗಳಿಗೆ ಸೂಚಿಸಿದ ನಂತರ ಎಫ್‌ಎಂಸಿಜಿ ಮತ್ತು ಬ್ಯಾಂಕ್ ಶೇರುಗಳು ಇಂದು ಮತ್ತೆ ಕುಸಿತ ಕಂಡವು. ನಿಫ್ಟಿ ಎಫ್‌ಎಂಸಿಜಿ ಶೇಕಡಾ 0.91 ರಷ್ಟು ಕುಸಿದರೆ, ಪಿಎಸ್​ಯು ಬ್ಯಾಂಕ್ ಸೂಚ್ಯಂಕ ಶೇಕಡಾ 0.81 ರಷ್ಟು ಕುಸಿದಿದೆ. ನಿಫ್ಟಿ ಹೆಲ್ತ್​ ಕೇರ್​ ಸೂಚ್ಯಂಕ ಶೇಕಡಾ 0.85, ಹಣಕಾಸು ಸೇವೆ ಸೂಚ್ಯಂಕ ಶೇಕಡಾ 0.77, ನಿಫ್ಟಿ ಬ್ಯಾಂಕ್ ಶೇಕಡಾ 0.76 ಮತ್ತು ಫಾರ್ಮಾ ಶೇಕಡಾ 0.74 ರಷ್ಟು ಕುಸಿದಿವೆ.