ತಕ್ಷಶಿಲೆ ವಿಶ್ವವಿದ್ಯಾನಿಲಯಗಳ ತಾಯಿ: ಹಿರಿಯ ವಿದ್ವಾಂಸ ಪ್ರೊ. ಕೆ.ಪಿ. ರಾವ್‌ ಅಭಿಮತ

ಉಡುಪಿ: ತಕ್ಷಶಿಲೆ ಕೇವಲ ವಿಶ್ವವಿದ್ಯಾಲಯ ಮಾತ್ರವಲ್ಲ. ಅದು ವಿಶ್ವವಿದ್ಯಾನಿಲಯ ಹಾಗೂ ಭಾಷೆಗಳ ತಾಯಿ ಎಂದು ಹಿರಿಯ ವಿದ್ವಾಂಸ ಪ್ರೊ. ಕೆ.ಪಿ. ರಾವ್‌ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ನಡೆದ ಸಾಧಕರೊಂದಿಗೆ ಸಂವಾದ ಹಾಗೂ ಜಿಲ್ಲಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಕ್ಷಶಿಲೆ ವಿದ್ಯಾ ಕೇಂದ್ರ ಆಗಿದ್ದರೂ ಅದಕ್ಕೆ ವಿಶ್ವವಿದ್ಯಾನಿಲಯ ಮಾನ್ಯತೆ ಇರಲಿಲ್ಲ. ಆ ಯೋಗ್ಯತೆಯೂ ಅದಕ್ಕೆ ಇಲ್ಲ ಎಂಬಂತಹ ಅಪವಾದ ಇತ್ತು. ಆದರೆ ಪಂಡಿತರ ಸಮ್ಮಿಲನ, ಒಬ್ಬೊರಿಗೊಬ್ಬರು ಸಂವಹನ ನಡೆಸುವ ಅನುಕೂಲ ಆ ಕಾಲಘಟ್ಟದಲ್ಲಿ ಇದ್ದುದರಿಂದ, ಸಾಹಿತ್ಯ ಹಾಗೂ ಭಾಷೆ ಒಂದು ರೂಪ ಪಡೆಯಲು ಸಾಧ್ಯವಾಯಿತು. ಹಾಗಾಗಿ ತಕ್ಷಶಿಲೆ ಬರೇ
ವಿಶ್ವವಿದ್ಯಾಲಯವಲ್ಲ, ಅದು ವಿಶ್ವವಿದ್ಯಾನಿಲಯ ಹಾಗೂ ಭಾಷೆಗಳ ತಾಯಿ ಎಂದರು.
ಮಾತೃಭಾಷೆ ಎನ್ನುವುದು ಪ್ರತಿ ಮನುಷ್ಯ ಕಲಿಯುವ ಮೊದಲ ಭಾಷೆ. ಆ ನಂತರ ಕಲಿಯುವ ಭಾಷೆಗಳು ಈ ಬುನಾದಿಯ ಮೇಲೆ ಕಟ್ಟಲ್ಪಟ್ಟ ಭಾಷೆಗಳಾಗಿವೆ. ಆದ್ದರಿಂದ ಮಾತೃಭಾಷೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಯಾವುದಾದರೂ ಒಂದು ಭಾಷೆಯ ಮೇಲೆ ನಮಗೆ ಹಿಡಿತ ಇರಬೇಕು. ಅದು ತುಳು, ಕನ್ನಡ ಅಥವಾ ಇಂಗ್ಲಿಷ್‌ ಭಾಷೆಯೇ ಆಗಿರಬಹುದು. ಇಲ್ಲದಿದ್ದರೆ
ಯಾವುದೇ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ನಾನು ಕನ್ನಡ ಪ್ರೇಮಿ ಮಾತ್ರವಲ್ಲ, ಭಾಷೆಯ ಪ್ರೇಮಿ. ನನಗೆ ಕನ್ನಡದಷ್ಟೇ ಸಂಸ್ಕೃತ, ಪರ್ಸಿಯಾನ್‌, ಉರ್ದು ಭಾಷೆಯ ಮೇಲೆ ಪ್ರೀತಿ ಇದೆ. ಭಾಷೆಗಳಲ್ಲಿ ಯಾವುದು ದೊಡ್ಡದು, ಚಿಕ್ಕದೆಂಬುವುದಿಲ್ಲ. ಎಲ್ಲ ಭಾಷೆಗಳಿಗೂ ಅದರದ್ದೇ ಆದ ಗೌರವ, ಸ್ಥಾನಮಾನಗಳಿವೆ. ಅದಕ್ಕೆ ಎಲ್ಲರೂ ಮನ್ನಣೆ ನೀಡಬೇಕು ಎಂದರು.
ಕೆ.ಪಿ. ರಾವ್‌ ಪದ್ಮಶ್ರೀ ಲಭಿಸಬೇಕಿತ್ತು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಾಹಿತಿ ಡಾ. ವೈದೇಹಿ ಮಾತನಾಡಿ, ಕೆ.ಪಿ. ರಾವ್‌ ಮಾಡಿರುವ ಸಾಧನೆಗೆ ಪದ್ಮಶ್ರೀ ಬರಬೇಕಿತ್ತು. ಅವರಿಗೆ ಪ್ರಶಸ್ತಿಯ ಆಸೆ ಇಲ್ಲ. ಅವರು ಪದ್ಮಶ್ರೀ ಪ್ರಶಸ್ತಿಗಿಂತಲೂ ಮಿಗಿಲಾದ ಸಾಧನೆ ಮಾಡಿದ್ದಾರೆ. ಆದರೆ ನಮಗೆ ಕೆ.ಪಿ.
ರಾವ್‌ ಪದ್ಮಶ್ರೀ ಸಿಗಬೇಕೆಂಬ ಆಸೆ ಇದೆ. ದೊರೆತರೆ ಅದು ಈ ನೆಲಕ್ಕೆ ಸಿಕ್ಕಿದ ಗೌರವ ಎಂದರು.
ದುಡ್ಡಿಗಾಗಿ ಮಾರಿಕೊಂಡವರಲ್ಲ:
ದುಡ್ಡಿಗೆ ಮಾರಿ ಹೋಗುವ ಇಂದಿನ ಜಗತ್ತಿನಲ್ಲಿ ಕೆ.ಪಿ. ರಾವ್‌ ಅವರು, ಅದನ್ನು ಮೀರಿ ನಿಂತಿದ್ದಾರೆ. ಅವರು ತನ್ನ ಕೆಲಸವನ್ನು ಎಂದೂ ದೊಡ್ಡದೆಂದು ಹೇಳಿಕೊಂಡಿಲ್ಲ. ಕನ್ನಡವೇ ಅವರನ್ನು ದೊಡ್ಡ ವ್ಯಕ್ತಿಯನ್ನಾಗಿ ರೂಪಿಸಿದೆ. ಅವರು ಯಾವುದೇ ಸಂಶೋಧನೆಯನ್ನು ಶ್ರಮದಿಂದ ಮಾಡಿಲ್ಲ. ಬದಲಾಗಿ ಸಂತೋಷದಿಂದ ಮಾಡಿದ್ದಾರೆ ಎಂದರು.
ಮಣಿಪಾಲ ಮಾಹೆಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ವರದೇಶಿ ಹಿರೇಗಂಗೆ ಅಭಿನಂದನಾ ಭಾಷಣ ಮಾಡಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ, ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್‌ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು.
ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.