ಒಂದು ತಿಂಗಳಲ್ಲಿ 3,419 ಕೋಟಿ ವಿದ್ಯುತ್ ಬಿಲ್: ಮಧ್ಯಪ್ರದೇಶ ವಿದ್ಯುತ್ ನೌಕರನ ಅವಾಂತರಕ್ಕೆ ತಲೆ ತಿರುಗಿ ಆಸ್ಪತ್ರೆ ಸೇರಿದ ಮನೆ ಹಿರಿಸದಸ್ಯ

ಭೋಪಾಲ್: ಒಂದೇ ತಿಂಗಳಲ್ಲಿ 3,419 ಕೋಟಿ ರೂಪಾಯಿ ವಿದ್ಯುತ್ ಖರ್ಚು! ಈ ವಿದ್ಯುತ್ ಬಿಲ್ ನೋಡಿ ಮನೆಯ ಮಾಲೀಕರಿಗೆ ತಲೆ ತಿರುಗಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಗ್ವಾಲಿಯರ್‌ನ ಶಿವ ವಿಹಾರ್ ಕಾಲೋನಿ ನಿವಾಸಿ ಪ್ರಿಯಾಂಕಾ ಗುಪ್ತಾ ಮನೆಗೆ ಜುಲೈನಲ್ಲಿ 3,419 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಬಂದಾಗ ಮನೆ ಮಂದಿಯೆಲ್ಲಾ ಆಘಾತಕ್ಕೊಳಗಾಗಿ ಮನೆಯ ಹಿರಿಯ ಸದಸ್ಯ, ಪ್ರಿಯಾಂಕಾರವರ ಮಾವ ಅಸ್ವಸ್ಥರಾಗಿ ಆಸ್ಪತ್ರೆ ಸೇರಬೇಕಾಗಿ ಬಂದಿದೆ. ತನ್ನ ತಂದೆ ವಿದ್ಯುತ್ ಬಿಲ್ ನೋಡಿ ಅಸ್ವಸ್ಥರಾಗಿದ್ದು, ಆಸ್ಪತ್ರೆ ಸೇರಿರುವುದಾಗಿ ಮಗ ಸಂಜೀವ್ ಹೇಳಿದ್ದು, ಮಧ್ಯಪ್ರದೇಶದ ಮಧ್ಯ ಕ್ಷೇತ್ರ ವಿದ್ಯುತ್ ವಿತರಣಾ ಕಂಪನಿ ಆರೋಪಿ ಸ್ಥಾನದಲ್ಲಿ ನಿಂತಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಧ್ಯಪ್ರದೇಶದ ವಿದ್ಯುತ್ ಇಲಾಖೆ ತರಾತುರಿಯಲ್ಲಿ ದೊಡ್ಡ ಪ್ರಮಾದ ನಡೆದಿರುವ ಬಗ್ಗೆ ಒಪ್ಪಿಕೊಂಡು ಕ್ಷಮೆ ಕೇಳಿದೆ. ಕೆಲಸಗಾರನ ತಪ್ಪಿನಿಂದ ಈ ಬಿಲ್ ಅನ್ನು ನೀಡಲಾಗಿದೆ ಎಂದು ಸ್ಪಷ್ಟಿಕರಣ ನೀಡಿ, ತಕ್ಷಣವೇ ಹೊಸ ಬಿಲ್ ರಚಿಸಲಾಗಿದೆ. ಹೊಸ ಬಿಲ್ ನಲ್ಲಿ ಪ್ರಿಯಾಂಕಾ ಅವರ ವಿದ್ಯುತ್ ಬಿಲ್ 1300 ಎಂದು ನಮೂದಿಸಲಾಗಿದೆ.

ನೌಕರನ ತಪ್ಪಿನಿಂದ ಈ ಘಟನೆ ನಡೆದಿದೆ ಎಂದು ವಿದ್ಯುತ್ ಸಾರಿಗೆ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕ ನಿತಿನ್ ಮಾಂಗ್ಲಿಕ್ ಹೇಳಿದ್ದಾರೆ. ಇದಕ್ಕಾಗಿ ಅವರು ವಿಷಾದಿಸಿದ್ದಾರೆ. ಈ ಅಪರಾಧ ಎಸಗಿದ ಕಾರ್ಮಿಕನನ್ನು ಗುರುತಿಸಲಾಗುವುದು ಎಂದು ಮಧ್ಯಪ್ರದೇಶದ ವಿದ್ಯುತ್ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಹೇಳಿದ್ದಾರೆ.

ಈ ಮಧ್ಯೆ ಆಸ್ಪತ್ರೆಗೆ ದಾಖಲಾದ ಮನೆಯ ಹಿರಿಯ ಸದಸ್ಯ ಇನ್ನೂ ಕೂಡಾ ಆಸ್ಪತ್ರೆಯಲ್ಲೇ ಇದ್ದಾರೆ ಎನ್ನಲಾಗಿದೆ.