ಸೆಪ್ಟಂಬರ್ 25 ರಿಂದ ಅಕ್ಟೋಬರ್ 1 ರವರೆಗೆ ಹಿರಿಯ ನಾಗರಿಕರ ಸಪ್ತಾಹ ಕಾರ್ಯಕ್ರಮ: ವೀಣಾ ಬಿ.ಎನ್

ಉಡುಪಿ: ಹಿರಿಯ ನಾಗರೀಕರ ಸಪ್ತಾಹ ಕಾರ್ಯಕ್ರಮವು ಸೆಪ್ಟಂಬರ್ 25 ರಿಂದ ಅಕ್ಟೋಬರ್ 1 ರ ವರೆಗೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡು ಅರ್ಥಪೂರ್ಣವಾಗಿ ಆಚರಿಸುವಂತೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಹಿರಿಯ ನಾಗರೀಕರ ಸಪ್ತಾಹ ಕಾರ್ಯಕ್ರಮ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿರಿಯ ನಾಗರೀಕರನ್ನು ಗೌರವಿಸಬೇಕು. ಅವರ ಸಲಹೆ ಸೂಚನೆಗಳು ನಮ್ಮೆಲ್ಲರಿಗೂ ಅಗತ್ಯವಾಗಿದ್ದು, ಅವರ ಅನುಭವಗಳನ್ನು ನಾವು ತಿಳಿದುಕೊಂಡಾಗ ನಮ್ಮ ಕೆಲಸ ಕಾರ್ಯಗಳನ್ನು ಅಲ್ಪ ಸಮಯದಲ್ಲಿಯೇ ನಿಖರವಾಗಿ ಮಾಡಲು ಅನುಕೂಲವಾಗುತ್ತದೆ ಎಂದರು.

ಈ ಬಾರಿಯ ಹಿರಿಯ ನಾಗರೀಕ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೇ 7 ದಿನಗಳ ಕಾಲ ಸಪ್ತಾಹ ರೂಪದಲ್ಲಿ ಆಚರಿಸಲಾಗುವುದು ಎಂದ ಅವರು ಸೆಪ್ಟೆಂಬರ್ 25 ರಂದು ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, 26 ರಂದು ಹಿರಿಯ ನಾಗರೀಕರ ಆರೋಗ್ಯ ತಪಾಸಣೆ, 27 ರಂದು ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, 28 ರಂದು ಹಿರಿಯ ನಾಗರೀಕರಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, 29 ರಂದು ಕಾನೂನು ಅರಿವು ಕಾರ್ಯಕ್ರಮ, 30 ರಂದು ಪೊಲೀಸ್ ಇಲಾಖೆಯಿಂದ ಕಾರ್ಯಾಗಾರ, ಅಕ್ಟೋಬರ್ 1 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಕ್ರೀಡಾಕೂಟದಲ್ಲಿ ನಡಿಗೆ, ರಿಂಗ್ ಎಸೆತ, ಮ್ಯೂಸಿಕಲ್ ಚೇರ್, ಸೇರಿದಂತೆ ಏಕ ಪಾತ್ರಾಭಿನಯ, ಗಾಯನ, ಚಿತ್ರಕಲಾ ಸ್ಪರ್ಧೆಗಳು ನಡೆಯಲಿವೆ ಎಂದ ಅವರು ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಕಲ್ಯಾಣಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ವೀಣಾ ವಿವೇಕಾನಂದ, ಜಿಲ್ಲಾ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ರತ್ನಾ, ಮತ್ತಿತರರು ಉಪಸ್ಥಿತರಿದ್ದರು.