ಬ್ರಹ್ಮಾವರ: ವಯೋವೃದ್ದರಾಗಿದ್ದ ಹಿರಿ ಜೀವವೊಂದು ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ಸಾವನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪಿ.ಯಶೋಧಾ ನಾರಾಯಣ ಉಪಾಧ್ಯ (83) ಎಂದು ಗುರುತಿಸಲಾಗಿದೆ. ಚುನಾವಣಾ ಆಯೋಗವು ದಿವ್ಯಾಂಗ ಹಾಗೂ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಅದಾಗಲೇ ಜಿಲ್ಲೆಯಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿ ಪಿ.ಯಶೋಧಾ ಕೂಡಾ ಈ ಸೌಲಭ್ಯ ಬಳಸಿ ಮನೆಯಲ್ಲೆ ಮತದಾನ ಮಾಡಿದ್ದಾರೆ. ಮತದಾನದ ದಿನ ಪಿ.ಯಶೋಧಾ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಮತದಾನ ಮಾಡಿ ಆಸ್ಪತ್ರೆ ತೆರಳಲು ಪಿ.ಯಶೋಧಾ ನಿಶ್ಚಯಿಸಿದ್ದಾರೆ. ಮತದಾನ ಮಾಡಿದ ಬಳಿಕ ಪಿ.ಯಶೋಧಾ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಿ.ಯಶೋಧಾ ಅವರು ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿಯೂ ಮತದಾನದ ಕರ್ತವ್ಯ ನೆರವೇರಿಸಿ ಇಹಲೋಕ ತ್ಯಜಿಸಿದ್ದಾರೆ.