ಹಿರಿಯ ಉದ್ಯಮಿ, ಸಮಾಜ ಸೇವಕ ಕೆ. ಸೇಸಪ್ಪ ಕೋಟ್ಯಾನ್ ವಿಧಿವಶ

ಬಂಟ್ವಾಳ: ಹಿರಿಯ ಉದ್ಯಮಿ, ಸಮಾಜ ಸೇವಕ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ 2022-23 ರ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಪಚ್ಚಿನಡ್ಕ ಕೆ.ಸೇಸಪ್ಪ ಕೋಟ್ಯಾನ್ (75) ಜನವರಿ 26ರಂದು ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ ಚಂದ್ರಾವತಿ, ಪುತ್ರ ಭುವನೇಶ್ ಪಚ್ಚಿನಡ್ಕ, ಹಾಗು ನಾಲ್ಕು ಹೆಣ್ಣುಮಕ್ಕಳ ಸಹಿತ ಬಂಧುಮಿತ್ರರನ್ನು ಅಗಲಿದ್ದಾರೆ. .
ಶುಭ ಬೀಡಿಗಳು ಹೆಸರಿನಲ್ಲಿ ಬೀಡಿ ಉದ್ಯಮವನ್ನು ಆರಂಭಿಸಿ ಸಹಸ್ರಾರು ಮಂದಿಗೆ ಉದ್ಯೋಗದಾತರಾದ ಅವರು, ರಿಕ್ಷಾ, ಸ್ಕೂಟರ್ ಮೂಲಕ ಮಾರುಕಟ್ಟೆ ಮಾಡಿದ್ದು ಹಂತಹಂತವಾಗಿ ಅದು ರಾಜ್ಯವ್ಯಾಪಿ ಬೆಳೆದದ್ದು ಇತಿಹಾಸ. ಶುಭಲಕ್ಷ್ಮೀ ಟ್ರಾವೆಲ್ಸ್ ಮೂಲಕ ಬಸ್ ಉದ್ಯಮವನ್ನೂ ಆರಂಭಿಸಿ, ಹಳ್ಳಿಪ್ರದೇಶದ ಜನರಿಗೆ ನೆರವಾದರು. ಸಿಹಿ ಪಾನೀಯ ಘಟಕ, ಶುಭಲಕ್ಷ್ಮೀ ಆಡಿಟೋರಿಯಂ ಸಭಾಂಗಣವನ್ನು ಆರಂಭಿಸಿ ಗಮನ ಸೆಳೆದ ಅವರು,ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರು. ಸತತ 26 ವರ್ಷಗಳಿಂದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿದ್ದರು. ಪಚ್ಚಿನಡ್ಕದ ಆದಿ ಮೊಗೇರ್ಕಳ ಕೊರಗಜ್ಜ ಕ್ಷೇತ್ರ, ಕೈಕಂಬ ಶ್ರೀ ಕ್ಷೇತ್ರ ಪೊಳಲಿ ದ್ವಾರದ ನಿರ್ಮಾಣ, ಅಮ್ಟಾಡಿ ನಲ್ಕೆಮಾರ್ ಶ್ರೀ ಮಾಂಗ್ಲಿಮಾರ್ ದೈವಸ್ಥಾನದ ದ್ವಾರದ ನಿರ್ಮಾಣ, ಪಾಳುಬಿದ್ದ ಪಡೆಂಕ್ಲಿಮಾರ್ ಕಲ್ಲುರ್ಟ್ಟಿ ದೈವಸ್ಥಾನದ ಮುಂತಾದ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದ ಅವರು, ಬಿ.ಸಿ.ರೋಡು ಪೊಲೀಸ್ ಲೈನ್ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿದ್ದರು. ಕೊರೊನಾ ಸಂದರ್ಭ 1500 ಕುಟುಂಬಗಳಿಗೆ 25 ಕೆಜಿ ಅಕ್ಕಿ ಮತ್ತು ತಲಾ 500 ರೂಗಳಂತೆ ನೀಡಿ ನೆರವಾದವರು. ಓಂ ಫ್ರೇಂಡ್ಸ್ ಪಚ್ಚಿನಡ್ಕದ ಗೌರವಾಧ್ಯಕ್ಷರಾಗಿ, ಕಲ್ಲುರ್ಟಿ ದೈವಸ್ಥಾನ ಪಡೆಂಕ್ಲಿಮಾರ್ ಗೌರವಾಧ್ಯಕ್ಷರಾಗಿ, ಪಚ್ಚಿನಡ್ಕ ಆದಿ ಮೊಗೆರ್ಕಳ ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷರಾಗಿ, ಭದ್ರಕಾಳಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಅವರ ಸಾಮಾಜಿಕ ಚಟುವಟಿಕೆ ಗುರುತಿಸಿ 2022-23 ರ ಸಾಲಿನಲ್ಲಿ‌ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು.ಇದಕ್ಕು ಮುನ್ನ ಬೀಡಿ ಉದ್ಯಮ ಹಾಗೂ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಶುಭಯಾನ ಎಂಬ ಕಾರ್ಯಕ್ರಮದ ಮೂಲಕ ಅವರನ್ನು ಸನ್ಮಾನಿಸಲಾಗಿತ್ತು.ಈ ಸಂದರ್ಭ ಹಲವಾರು ಅಶಕ್ತರಿಗೆ ಸಹಾಯಧನ ವಿತರಿಸಲಾಗಿತ್ತು.