ಕಾರ್ಕಳ: ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ಎರಡು ದಿನಗಳ ವಿಚಾರ ಸಂಕೀರ್ಣವು ಇತ್ತೀಚೆಗೆ ನಡೆಯಿತು.
ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಗುರುರಾಜ್ ತಂತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವೈದ್ಯರಿಗೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ವೈದ್ಯಕೀಯ ವಿಚಾರ ಸಂಕಿರಣಗಳ ಮಹತ್ವವನ್ನು ತಿಳಿಸಿದರು.
ಮೊದಲ ದಿನದ ಸಂಪನ್ಮೂಲ ವ್ಯಕ್ತಿ, ಮಿತ್ರ ಆಸ್ಪತ್ರೆಯ ನಿರ್ದೇಶಕರಾದ ಡಾ. ಶ್ರೀಧರ್ ಹೊಳ್ಳ ಮತ್ತು ಮಿತ್ರ ಆಸ್ಪತ್ರೆಯ ಚಿಕಿತ್ಸಕರಾದ ಡಾ. ಸಾರಿಕಾ ಹೊಳ್ಳ ಇವರು ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ನೀಡಿದರು.
ಸ್ವಸ್ಥವೃತ್ತ ವಿಭಾಗದ ಪ್ರಾಧ್ಯಾಪಕ ಡಾ. ವ್ಯಾಸರಾಜ್ ತಂತ್ರಿ, ತುರ್ತು ಚಿಕಿತ್ಸಾ ಕ್ರಮಗಳು ಹಾಗೂ ವೈದ್ಯಕೀಯ ದಾಖಲೆಗಳ ನಿರ್ವಹಣೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಸೂತಿ ತಂತ್ರ ವಿಭಾಗದ ಪ್ರಾಧ್ಯಾಪಕಿ ಡಾ. ದೀಪಶ್ರೀ ಶೆಟ್ಟಿ ಸಾಮಾನ್ಯ ಸ್ತ್ರೀ ರೋಗ ಹಾಗೂ ಅವುಗಳ ತಪಾಸಣೆ, ಕುರಿತಾಗಿ ವಿವರಿಸಿದರು.
ಉದ್ಘಾಟನಾ ಕಾರ್ಯಕ್ರಮವನ್ನು ಡಾ. ರಶ್ಮಿ ಕಲ್ಕೂರ ನಿರೂಪಿಸಿದರು, ಕಾಯಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪ್ರಮೋದ್ ಶೇಟ್ ಸ್ವಾಗತಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುನಿಯಾಲು ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಡಾ. ಶ್ರದ್ಧಾ ಶೆಟ್ಟಿ ಮಾತನಾಡಿ ವೈದ್ಯರ ಕೌಶಲಾಭಿವೃದ್ಧಿಗೆ ಇಂತಹ ವಿಚಾರ ಸಂಕಿರಣಗಳು ಬಹುಮುಖ್ಯ ಎಂದರು.
ಕೌಮಾರ ಬೃತ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ನಿವೇದಿತಾ ಹೆಬ್ಬಾರ್ ಸ್ವಾಗತಿಸಿದರು, ಕಾಯಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪ್ರಮೋದ್ ಶೇಟ್ ವಂದಿಸಿದರು, ಕ್ರಿಯಾಶರೀರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಶ್ವಿನಿ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.