ಕುಂದಾಪುರ: ಭಂಡಾರ್ಕರ್ಸ್ ಕಾಲೇಜಿನಲ್ಲಿ ಸ್ವಯಂ ಪ್ರತಿಫಲನ ಕಾರ್ಯಗಾರ

ಕುಂದಾಪುರ: ನಮ್ಮೊಳಗಿನ ಶಕ್ತಿಯನ್ನು ಅರಿಯುವ ತನಕ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ನಾವೇನು, ನಮ್ಮ ಶಕ್ತಿ ಏನೆಂದು ಅರಿತರೆ ಅಂದುಕೊಂಡ ಗುರಿಯನ್ನು ತಲುಪಬಹುದು ಎಂದು ಮಂಗಳೂರಿನ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಇದರ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಸಚಿತ ನಂದಗೋಪಾಲ್ ಹೇಳಿದರು.

ಅವರು ಜುಲೈ15 ರಂದು ಭಂಡರ್ಕಾರ್ಸ್ ಕಾಲೇಜಿನಲ್ಲಿ ಐಚ್ಛಿಕ ಭಾಷೆ ಇಂಗ್ಲಿಷ್-ಪತ್ರಿಕೋದ್ಯಮ ಹಾಗೂ ಮನಶಾಸ್ತ್ರ ವಿಭಾಗಗಳು ಸೇರಿ ಆಯೋಜಿಸಿದ್ದ ‘ಸ್ವಯಂ ಪ್ರತಿಫಲನ’ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.

ಜೀವನದಲ್ಲಿ ಅನೇಕ ಬಾರಿ ಸೋಲು ಗೆಲುವು ಎಲ್ಲವೂ ಬರುತ್ತದೆ ಆದರೆ ಅವನ್ನು ಹೇಗೆ ಎದುರಿಸಬೇಕೆಂಬುದನ್ನು ಮೊದಲು ಅರಿತಿರಬೇಕು ಇಲ್ಲವಾದಲ್ಲಿ ಬದುಕನ್ನು ಗೆಲುವಿನ ಹಂತಕ್ಕೆ ಸಾಗಿಸುವುದು ಕಷ್ಟವಾಗುತ್ತದೆ. ಹಾಗಾಗಿ ಸೋಲನ್ನು ಎದೆಗುಂದದೆ ಸ್ವೀಕರಿಸಬೇಕು.ಕಾಲೇಜಿನ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿದ್ದ ಅವರು ತನ್ನ ಜೀವನದ ಘಟನೆಯನ್ನು ಹಂಚಿಕೊಂಡು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ವಿದ್ಯಾರ್ಥಿಗಳು ಸದಾ ಲವಲವಿಕೆಯಿಂದ ಬದುಕಿನ ಪ್ರತಿ ಕ್ಷಣವನ್ನು ಅನುಭವಿಸಬೇಕು ಆಗ ಮಾತ್ರ ಜೀವನಕ್ಕೆ ಅರ್ಥ ಲಭಿಸುತ್ತದೆ. ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳೇ ಹೆಚ್ಚು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಂತವರಿಗೆ ನಿಜಕ್ಕೂ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ ಹಾಗಾಗಿ ಇಂತಹ ಉಪಯುಕ್ತ ಕಾರ್ಯಾಗಾರ ನಡೆಸುವುದು ಸಮರ್ಪಕವಾಗಿದೆ ಎಂದರು.

ನೃತ್ಯ ಚಿಕಿತ್ಸಕ ಮತ್ತು ಚಲನವಲನ ವಿಧಾನಗಳ ಮೂಲಕ ಮತ್ತು ಚಿತ್ರಕಲೆ ಮುಂತಾದ ಭಿನ್ನ ಚಟುವಟಿಕೆಗಳನ್ನು ಮಕ್ಕಳಿಗೆ ನೀಡಿ ಮನಸ್ಸನ್ನು ಅರಿಯುವ ವಿಧಾನವನ್ನು ಅವರು ತಿಳಿಸಿದರು. ಮಕ್ಕಳ ಅದೆಷ್ಟೋ ಅನುಮಾನಗಳನ್ನು ಬಗೆಹರಿಸಿ ಬದಲಾವಣೆ ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎನ್ ‌ಪಿ ನಾರಾಯಣ ಶೆಟ್ಟಿ ವಹಿಸಿದ್ದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಮೀನಾಕ್ಷಿ ಎನ್ ಎಸ್ , ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಮಲತಾ ನಾಯ್ಕ್ , ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ಶೆಟ್ಟಿ , ವಿದ್ಯಾರ್ಥಿ ಪ್ರತಿನಿಧಿ ಭಾವನ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಯಜುಷಾ ಕಾರ್ಯಕ್ರಮ ನಿರ್ವಹಿಸಿ, ಫಾತಿಮಾ ಅನಾಜ್ ಅತಿಥಿಗಳ ಪರಿಚಯಿಸಿ ನೆರವೇರಿಸಿದರು, ಲಮೀಸ್ ವಂದಿಸಿದರು.