ಮಂಗಳೂರು: ಮಳಲಿಯ ಜುಮಾ ಮಸೀದಿಯ ಹೊರಗೆ ಬಿಗಿ ಭದ್ರತೆ, 500 ಮೀಟರ್ ಸುತ್ತಳತೆಯಲ್ಲಿ ಸೆಕ್ಷನ್ 144 ಜಾರಿ

ಮಂಗಳೂರು: ಕಳೆದ ತಿಂಗಳು ಮಳಲಿಯಲ್ಲಿ ಮಸೀದಿ ಮರು ನಿರ್ಮಾಣ ಸಂದರ್ಭದಲ್ಲಿ ಗಮನಕ್ಕೆ ಬಂದಿದ್ದ  ಹಿಂದು ದೇವಾಲಯದಂತಹ ರಚನೆ ಕಂಡು ಬಂದಿರುವ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಹಿಂದೂ ಸಂಘಟನೆಗಳು ಬುಧವಾರ ಗಂಜಿಮಠದ ತೆಂಕುಲಿಪಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ‘ತಾಂಬೂಲ ಪ್ರಶ್ನೆ’ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮಸೀದಿಯ ಬಳಿ ಪೋಲೀಸ್ ನಿಯೋಜನೆಗೊಳಿಸಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕುಲಿಪಾಡಿ ಗ್ರಾಮದ ಮಳಲಿಯ ಜುಮ್ಮಾ ಮಸೀದಿಯ 500 ಮೀಟರ್ ವ್ಯಾಪ್ತಿಯಲ್ಲಿ ಮೇ 26 ರ ಬೆಳಿಗ್ಗೆ 8 ರವರೆಗೆ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144 ಅನ್ನು ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್

ಇಲ್ಲಿಯ ದೈವತ್ವ ಸ್ಥಾಪನೆಗಾಗಿ ಹಿಂದೂ ಸಂಘಟನೆಗಳು ‘ತಾಂಬೂಲ ಪ್ರಶ್ನೆ’ ಇಟ್ಟಿದ್ದು, ಅಗತ್ಯ ಬಿದ್ದರೆ ‘ಅಷ್ಟಮಂಗಲ ಪ್ರಶ್ನೆ’ ಇಡಲು ಮುಂದಾಗಿವೆ ಎನ್ನಲಾಗಿದೆ.

ಈ ನಡುವೆ ಜನರು ಶಾಂತಿ ಕಾಪಾಡುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮನವಿ ಮಾಡಿದ್ದಾರೆ. “ಸಮಸ್ಯೆ ನ್ಯಾಯಾಲಯದ ಮುಂದಿದ್ದು, ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಎಲ್ಲಾ ಕಕ್ಷಿದಾರರಿಗೆ ವಿಶೇಷವಾಗಿ, ಜುಮ್ಮಾ ಮಸೀದಿ ಅಧ್ಯಕ್ಷರಿಗೆ ತಡೆಯಾಜ್ಞೆ ನೀಡಿದೆ. ಇಲ್ಲಿ ಮುಖ್ಯವಾದುದು ಕಾನೂನು ದಾಖಲೆಗಳು. ನ್ಯಾಯಾಲಯ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ” ಎಂದಿದ್ದಾರೆ.