ಮಣಿಪಾಲ: ಮಣಿಪಾಲ್ ಡೆಂಟಲ್ ಕಾನ್ಫರೆನ್ಸ್‌ ನ ಎರಡನೇ ಆವೃತ್ತಿ ಸಂಪನ್ನ

ಮಣಿಪಾಲ: ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಆಗಸ್ಟ್ 10 ಮತ್ತು 11 ರಂದು ಮಣಿಪಾಲ್
ಡೆಂಟಲ್ ಕಾನ್ಫರೆನ್ಸ್‌ ನ ನಿರೀಕ್ಷಿತ ಎರಡನೇ ಆವೃತ್ತಿಯನ್ನು ಆಯೋಜಿಸಿತ್ತು. ಮಾಹೆಯ 2023 ರ ಘೋಷಣೆಯಂತೆ ಈ ವರ್ಷ ಅಂತರಾಷ್ಟ್ರೀಕರಣದ ವರ್ಷ ಎಂದು ಆಚರಿಸುತ್ತಿದ್ದು, ಈ ಪದವಿಪೂರ್ವ ವಿದ್ಯಾರ್ಥಿ ಸಮ್ಮೇಳನದಲ್ಲಿ ಪ್ರಮುಖ ಭಾಷಣಕಾರರಾಗಿ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಉತ್ತಮ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು.

ಸಮ್ಮೇಳನವನ್ನು ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಉದ್ಘಾಟಿಸಿ ಉತ್ಸಾಹಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಂಶೋಧನೆಯ ಅತ್ಯುನ್ನತ ಮಹತ್ವವನ್ನು ಒತ್ತಿ ಹೇಳಿ ಸಂಶೋಧನಾ ಅನ್ವೇಷಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಸಮಾರಂಭದಲ್ಲಿ ಮಾಹೆಯ ಹಳೆ ವಿದ್ಯಾರ್ಥಿಗಳ ಸಂಘದ ನಿರ್ದೇಶಕ ಡಾ. ರೋಹಿತ್ ಸಿಂಗ್ ಮಾತನಾಡಿ, ಸಂಸ್ಥೆ ಮತ್ತು ಅದರ ಹಳೆಯ ವಿದ್ಯಾರ್ಥಿಗಳ ನಡುವಿನ ಶಾಶ್ವತ ಬಾಂಧವ್ಯದ ಬಗ್ಗೆ ಮಾಹಿತಿ ನೀಡಿದರು.

ದೇಶ ವಿದೇಶಗಳಲ್ಲಿ ತಮ್ಮ ಕ್ಷೇತ್ರದಲ್ಲಿ ಅದ್ವೀತಿಯ ಸೇವೆಯನ್ನು ಮಾಡಿದ ಮಾಹೆಯ ಹಳೆಯ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ವಿಶೇಷ ಭಾಷಣಕಾರರಾಗಿ ಡಾ. ಸುಬ್ರಾಯ ಜಿ. ಭಟ್, ಸಹ ಪ್ರಾಧ್ಯಾಪಕರು, ಸೌದಿ ಅರೇಬಿಯಾದ ಇಮಾಮ್ ಅಬ್ದುಲ್ ರಹಮಾನ್ ಬಿನ್ ಫೈಸಲ್ ವಿಶ್ವವಿದ್ಯಾನಿಲಯ; ಡಾ. ಸೋನಿ ಸ್ಟೀಫನ್, ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ ಮಕ್ಕಳ
ದಂತ ವೈದ್ಯಶಾಸ್ತ್ರದ ಕ್ಲಿನಿಕಲ್ ಹಿರಿಯ ಉಪನ್ಯಾಸಕ; ಡಾ.ನೀಲ್ ಪಾಂಡೆ, ನಿರ್ದೇಶಕರು, ಹೆಲ್ತಿ ಸ್ಮೈಲ್ಸ್, ಕಾಠ್ಮಂಡು, ನೇಪಾಳ ; ಡಾ. ಅರಿಂದಮ್ ದತ್ತಾ, ಹಿರಿಯ ಕ್ಲಿನಿಕಲ್ ಉಪನ್ಯಾಸಕರು, ಪುನಶ್ಚೈತನ್ಯಕಾರಿ ದಂತವೈದ್ಯಶಾಸ್ತ್ರ ಸ್ಕೂಲ್ ಆಫ್ ಡೆಂಟಿಸ್ಟ್ರಿಯಲ್ಲಿ, ಕಾರ್ಡಿಫ್ ವಿಶ್ವವಿದ್ಯಾಲಯ, ಯು.ಕೆ; ಮತ್ತು ಡಾ. ರೀತುಲ್ ಅಗರ್ವಾಲ್, ಯುಎಇಯಲ್ಲಿ ಒಬ್ಬ ನಿಪುಣ ಸೌಂದರ್ಯ ದಂತವೈದ್ಯೆ. ಇವರು ತಮ್ಮ
ಭಾಷಣದಲ್ಲಿ ಪೀಡಿಯಾಟ್ರಿಕ್ ಡೆಂಟಿಸ್ಟ್ರಿ, ಸೌಂದರ್ಯದ ದಂತವೈದ್ಯಶಾಸ್ತ್ರ, ಇಂಪ್ಲಾಂಟಾಲಜಿ, ರೆಸ್ಟೋರೇಟಿವ್ ಡೆಂಟಿಸ್ಟ್ರಿ ಮತ್ತು ಪೆರಿಯೊಡಾಂಟಾಲಜಿಯಲ್ಲಿನ ಒಳನೋಟ ಹಾಗು ಹೊಸ ಪ್ರಕ್ರಿಯೆಗಳ ಬಗ್ಗೆ ತಿಳಿಸಿದರು.

ರಾಷ್ಟ್ರದಾದ್ಯಂತ 35 ದಂತ ಶಾಲೆಗಳ 300 ಕ್ಕೂ ಹೆಚ್ಚು ಪದವಿಪೂರ್ವ ವಿದ್ಯಾರ್ಥಿಗಳ ಉತ್ಸಾಹಪೂರ್ಣ ಭಾಗವಹಿಸುವಿಕೆಗೆ ಸಮ್ಮೇಳನ ಸಾಕ್ಷಿಯಾಯಿತು. ಸಮ್ಮೇಳನದ ಕಾರ್ಯಸೂಚಿಯು ಒಟ್ಟು ಐದು ಪ್ರಬುದ್ಧ ಅತಿಥಿ ಉಪನ್ಯಾಸಗಳಿಂದ ಪುಷ್ಟೀಕರಿಸಲ್ಪಟ್ಟಿದ್ದು, ನಾಲ್ಕು ಕಾರ್ಯಾಗಾರಗಳಿಂದ ಪೂರಕವಾಗಿತ್ತು. ಹೆಚ್ಚುವರಿಯಾಗಿ, ಸಮ್ಮೇಳನವು ಇ-ಪೋಸ್ಟರ್ ಪ್ರಸ್ತುತಿಯನ್ನು ಒಳಗೊಂಡಿತ್ತು, ಈ
ಸಮಯದಲ್ಲಿ 61 ಇ-ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು.

ಮಣಿಪಾಲ್ ದಂತ ಸಮ್ಮೇಳನ 2023 ದಂತವೈದ್ಯ ವಿದ್ಯಾರ್ಥಿಗಳಿಗೆ ನಿಪುಣ ಹಳೆಯ ವಿದ್ಯಾರ್ಥಿಗಳಿಂದ ಅಮೂಲ್ಯವಾದ ಒಳನೋಟಗಳನ್ನು ಪಡೆಯಲು ಮತ್ತು ಅವರೊಂದಿಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮಹತ್ವದ ವೇದಿಕೆಯಾಗಿ ಹೊರಹೊಮ್ಮಿತು. ಈ ಸಮ್ಮೇಳನವು ಕಾಲೇಜಿನ ಶೈಕ್ಷಣಿಕ ಉತ್ಕೃಷ್ಟತೆಯನ್ನು ಬೆಳೆಸುವಲ್ಲಿ ಇರುವ ಬದ್ಧತೆಯನ್ನು ಸಾರಿ ಹೇಳಿತಲ್ಲದೆ, ದಂತವೈದ್ಯ ಕ್ಷೇತ್ರದಲ್ಲಿ ನಾವೀನ್ಯತೆ, ಸಂಶೋಧನೆ ಮತ್ತು ಅಂತರರಾಷ್ಟ್ರೀಯ ಸಹಯೋಗಕ್ಕೆ ಸಂಸ್ಥೆಯು ನೀಡುವ ಪ್ರಾಮುಖ್ಯತೆಗೆ
ನಿದರ್ಶನವಾಯಿತು.