ಮೈಸೂರು: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೊಳ್ಳುತ್ತಿರುವ ‘ರಾಮ ಲಲ್ಲಾ’ನ ಸಂಕೀರ್ಣವಾದ ಕೆತ್ತನೆಯ ವಿಗ್ರಹವನ್ನು ಕರ್ನಾಟಕದ ಮೈಸೂರು ಮೂಲದ ನುರಿತ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಚಿಸಿದ್ದಾರೆ.
ಇದನ್ನು ಬಿಜೆಪಿ ವರಿಷ್ಠ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೃಢಪಡಿಸಿದ್ದಾರೆ. ಅವರು ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿಯೋಗಿರಾಜ್ ಅವರ ರಚನೆಗೆ ಸಂತಸ ವ್ಯಕ್ತಪಡಿಸಿ, “ರಾಮಾಯಣದಲ್ಲಿ ನಮ್ಮ ಕಿಷ್ಕಿಂಧೆಯ ಆಂಜನೇಯ ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪಟ್ಟಾಭಿಷೇಕದಲ್ಲಿ ವಿಶೇಷ ಪಾತ್ರ ವಹಿಸಿದ್ದನ್ನು ನೆನಪಿಸುವಂತೆ ಈಗ ಮತ್ತೊಂದು ಸುಯೋಗ ಒದಗಿಬಂದಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಪ್ರಭು ಶ್ರೀರಾಮನ ವಿಗ್ರಹ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆಗೆ ಆಯ್ಕೆಯಾಗಿದ್ದು, ವಿಶೇಷವಾಗಿ ರಾಜ್ಯದ ಸಮಸ್ತ ಭಕ್ತ ಜನತೆಯ ಹೆಮ್ಮೆ, ಸಂತಸಗಳನ್ನು ದುಪ್ಪಟ್ಟುಗೊಳಿಸಿದೆ. ರಾಜ್ಯಕ್ಕೂ ರಾಮಮಂದಿರಕ್ಕೂ ಮತ್ತೊಂದು ವಿಶೇಷ ನಂಟನ್ನು ಸಾಧ್ಯವಾಗಿಸಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಭಿಮಾನಪೂರ್ವಕ ಅಭಿನಂದನೆಗಳು” ಎಂದು ಬರೆದಿದ್ದಾರೆ.
ಯೋಗಿರಾಜ್ ಅವರಿಗೆ ದೇಶದ ಇತರ ಇಬ್ಬರು ನುರಿತ ಕುಶಲಕರ್ಮಿಗಳಾದ ಬೆಂಗಳೂರಿನ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯ ನಾರಾಯಣ ಪಾಂಡೆ ಅವರೊಂದಿಗೆ ಶ್ರೀರಾಮನ ಮಗುವಿನ ರೂಪವನ್ನು ಬಿಂಬಿಸುವ ಪ್ರತಿಮೆಗಳನ್ನು ರಚಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಯೋಗಿರಾಜ್ ಅವರ ಮೇರುಕೃತಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಯ್ಕೆ ಮಾಡಿದೆ ಎಂದು ವರದಿಯಾಗಿದೆ.
ನ್ಯೂಸ್ 18 ಜೊತೆ ಮಾತನಾಡಿದ ಯೋಗಿರಾಜ್ ಅವರ ಪತ್ನಿ ವಿಜೇತಾ, ಇದು ತಮ್ಮ ಕುಟುಂಬಕ್ಕೆ, ಮೈಸೂರು ನಗರಕ್ಕೆ ಮತ್ತು ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. ನಾಯಕರು ಮತ್ತು ಮಂತ್ರಿಗಳ ನೂರಾರು ಅಭಿನಂದನಾ ಕರೆಗಳನ್ನು ಕುಟುಂಬವು ಸ್ವೀಕರಿಸಿದೆ ಎಂದಿರುವ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಅಧಿಕಾರಿಗಳಿಂದ ಔಪಚಾರಿಕ ಪತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಯೋಗಿರಾಜ್ ಅವರು “ವಿಗ್ರಹವು ದೈವಿಕವಾಗಿರುವ ಮಗುವಿನದ್ದಾಗಿರಬೇಕು, ಏಕೆಂದರೆ ಅದು ದೇವರ ಅವತಾರದ ಪ್ರತಿಮೆಯಾಗಿದೆ. ಪ್ರತಿಮೆಯನ್ನು ನೋಡುವ ಜನರು ದೈವತ್ವವನ್ನು ಅನುಭವಿಸಬೇಕು. ಮಗುವಿನ ಮುಖದ ಜೊತೆಗೆ ದೈವತ್ವದ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು, ನಾನು ಆರರಿಂದ ಏಳು ತಿಂಗಳ ಹಿಂದೆ ನನ್ನ ಕೆಲಸವನ್ನು ಪ್ರಾರಂಭಿಸಿದೆ. ಆಯ್ಕೆಗಿಂತ ಹೆಚ್ಚಾಗಿ, ಜನರು ಅದನ್ನು ಮೆಚ್ಚುವಂತಿರಬೇಕು. ಆಗ ಮಾತ್ರ ನಾನು ಸಂತೋಷವಾಗಿರುತ್ತೇನೆ ” ಎಂದಿದ್ದಾರೆ.