ಸೆ. 21ರಿಂದ ಶಾಲೆಗಳನ್ನು ತೆರೆದರೂ ತರಗತಿಗಳನ್ನು ಆರಂಭಿಸುವುದಿಲ್ಲ- ಸುರೇಶ ಕುಮಾರ್

ಮೈಸೂರು: ಸೆಪ್ಟೆಂಬರ್ 21ರಿಂದ ಕೇವಲ ಶಾಲೆಗಳನ್ನು ಮಾತ್ರ ತೆರೆಯಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರದಿಂದ ಸೂಕ್ತ ಮಾರ್ಗಸೂಚಿ ಬರುವವರೆಗೆ ತರಗತಿಗಳನ್ನು ಆರಂಭಿಸುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ತಿಳಿಸಿದ್ದಾರೆ.

ಇಂದು ಮೈಸೂರಿನಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಸೆ. 30ರೊಳಗೆ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಬೇಕು. ಕೇವಲ ಒಂದು ಟರ್ಮ್ ಫೀಸ್ ಮಾತ್ರ ಖಾಸಗಿ ಶಾಲೆ ಪಡೆಯಬೇಕು. ಆಗೊಮ್ಮೆ ಸಮಸ್ಯೆ ಆದರೆ ಡಿಡಿಪಿಐ, ಬಿಇಒ ಈ‌ ಬಗ್ಗೆ ಕ್ರಮ‌ ಕೈಗೊಳ್ಳುತ್ತಾರೆ. ಅವರಿಗೆ ಈಗಾಗಲೇ ಸರ್ಕಾರದಿಂದ ಸೂಚನೆ ಕೊಟ್ಟಿದ್ದೇವೆ. ಯಾವುದೇ ಪೋಷಕರಿಗೆ ಇದರಿಂದ ಸಮಸ್ಯೆ ಆದರೆ ಬಿಇಒ ಸಂಪರ್ಕಿಸಿ ಎಂದು ತಿಳಿಸಿದರು.

ರಾಜ್ಯದಲ್ಲಿ ಸರ್ಕಾರಿ ಶಾಲೆಯತ್ತ ಪೋಷಕರು, ಮಕ್ಕಳನ್ನು ದಾಖಲಾತಿ ಮಾಡುತ್ತಿದ್ದಾರೆ. ಎಷ್ಟೇ ಮಕ್ಕಳು ಬಂದರು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಖಾಸಗಿ ಶಾಲೆಯಿಂದ ಟಿಸಿ ಕೊಡದಿದ್ರೆ ಬಿಇಒಯಿಂದ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.