ಸದ್ಯಕ್ಕೆ ಶಾಲಾ-ಕಾಲೇಜು ಆರಂಭವಾಗುವುದಿಲ್ಲ: ಸಚಿವ ಸುರೇಶ್ ಕುಮಾರ್ 

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಆದ್ದರಿಂದ ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ಅವರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆ ಕುರಿತು ಸಭೆ ನಡೆಸಿದರು. ಶಾಲೆಗಳನ್ನು ಆರಂಭಿಸದಿದ್ದರೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಎಲ್ಲ ಆಯಾಮಗಳಿಂದ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪಡಸಾಲೆ ಶಾಲೆ, ಮನೆಶಾಲೆ, ವಠಾರ ಶಾಲೆ, ತಂತ್ರಜ್ಞಾನ ಆಧಾರಿತ ಶಿಕ್ಷಣ, ಚಂದನ ದೂರದರ್ಶನ ವಾಹಿನಿ, ಖಾಸಗಿ ವಾಹಿನಿ, ಆಕಾಶವಾಣಿ, ಶಿಕ್ಷಣ ಇಲಾಖೆಯ ಸೌಲಭ್ಯಗಳ ಮೂಲಕ ಎಲ್ಲಾ ಅವಕಾಶ ಬಳಸಿಕೊಂಡು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.