ಬಜಪೆ: 5 ಲಕ್ಷ ರೂ ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಶಾಲಾ ಸಂಚಾಲಕಿ

ಬಜಪೆ: ವಿದ್ಯೆ ಕಲಿಸಿ ವಿದ್ಯಾರ್ಥಿಗಳನ್ನು ಸರಿಯಾದ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡಬೇಕಾಗಿರುವ ವಿದ್ಯಾ ದೇಗುಲಗಳೇ ಭ್ರಷ್ಟಾಚಾರಕ್ಕೆ ಎಡೆ ಮಾಡಿದಾಗ ಸಮಾಜಕ್ಕೆ ದಾರಿ ತೋರುವವರು ಯಾರು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬಜಪೆಯ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕಿ ಜ್ಯೋತಿ ಪೂಜಾರಿ ಲಂಚ ಸ್ವೀಕರಿಸುವ ವೇಳೆ ಲೋಕಾಯಕ್ತ ಬಲೆಗೆ ಸಿಲುಕಿ ಬಿದ್ದಿದ್ದಾರೆ.

ಈ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಲಿರುವ ಮುಖ್ಯ ಶಿಕ್ಷಕಿಯ ದಾಖಲೆಗಳಿಗೆ ಸಹಿ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಶುಕ್ರವಾರದಂದು 5 ಲಕ್ಷ ರೂ ಸ್ವೀಕರಿಸುತ್ತಿದ್ದ ವೇಳೆ ಅನುದಾನಿತ ಶಾಲಾ ಸಂಚಾಲಕಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಅದೇ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಶೋಭಾರಾಣಿ ಅವರ ನಿವೃತ್ತಿ ಹಾಗೂ ಉಪದಾನ ದಾಖಲೆಗಳಿಗೆ ಶಾಲಾ ಸಂಚಾಲಕರು ಸಹಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಬೇಕಾಗಿತ್ತು. ಈ ದಾಖಲೆಗೆ ಸಹಿ ಹಾಕಿ ಹಾಕಲು ಜ್ಯೋತಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರು ನೀಡಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಸಂಚಾಲಕಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.