ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ವಿದ್ಯಾರ್ಥಿಗಳೆಲ್ಲರೂ ಸಂವಿಧಾನದ ಪೀಠಿಕೆ ಓದುವಂತೆ ಪೂರಕ ಆದೇಶ ನೀಡಲು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ ಮಹದೇವಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಗುರುವಾರದಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಎಲ್ಲರೂ ಸಂವಿಧಾನದಲ್ಲಿ ಸೂಚಿತ ಮಾರ್ಗದಲ್ಲಿ ಕೆಲಸ ಮಾಡಲು ಸೂಚಿಸಿದರು. ಇದೇ ವೇಳೆ ರಾಜ್ಯದ ಎಲ್ಲಾ ಶಾಲೆ ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಂದ ಓದಿಸುವುದಕ್ಕೆ ಪೂರಕ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಪ.ಜಾ ಹಾಗೂ ಪ.ಪಂ. ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿಳಂಬವಾಗುತ್ತಿರುವುದರಿಂದಗಿ ಕಾಲೇಜು ದಾಖಲಾತಿ ಸಮಸ್ಯೆಯಾಗುತ್ತಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಹೇಳಿದರು.
ಕೇಂದ್ರ ಸರ್ಕಾರದಿಂದ ಶೇ.60 ಹಾಗೂ ರಾಜ್ಯದಿಂದ ಶೇ.40 ಅನುಪಾತದಲ್ಲಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು ಸಂವಿಧಾನದ ಬದ್ಧವಾಗಿ ಕೆಲಸ ಮಾಡಲು ಪ್ರಮಾಣ ವಚನ ಸ್ವೀಕಾರ ಮಾಡಿದ್ದೇವೆ, ಅದನ್ನು ಉಲ್ಲಂಘನೆ ಮಾಡಿದರೆ ಚಾಟಿ ಬೀಸುತ್ತೇನೆ ಎಂದರು.