ಕ್ಯಾಥೋಲಿಕ್ ಅಸೋಸಿಯೇಷನ್ ​​ಆಫ್ ಸೌತ್ ಕೆನರಾ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು: ಕ್ಯಾಥೋಲಿಕ್ ಅಸೋಸಿಯೇಷನ್ ​​ಆಫ್ ಸೌತ್ ಕೆನರಾ (CASK) 1914 ರಲ್ಲಿ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅದ್ಭುತ ಸೇವೆಯನ್ನು ಮಾಡಿದೆ. ವಿಶೇಷವಾಗಿ ಕಳೆದ ಒಂದು ದಶಕದಲ್ಲಿ ಅನೇಕ ಪರಿಣಾಮಕಾರಿ ದತ್ತಿ ಮತ್ತು ಸಮುದಾಯ ಸೇವಾ ಯೋಜನೆಗಳನ್ನು ಸಂಸ್ಥೆಯು ಅನುಷ್ಠಾನಗೊಳಿಸಿದೆ.

ಅಸೋಸಿಯೇಷನ್ ನ ಪ್ರಮುಖ ಯೋಜನೆಗಳು:

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ (5,665 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ); ಶಿಕ್ಷಕರ ಉನ್ನತೀಕರಣ ಕಾರ್ಯಕ್ರಮ (1,543 ಶಿಕ್ಷಕರು ಪ್ರಯೋಜನ ಪಡೆದಿದ್ದಾರೆ);
ವಿದ್ಯಾರ್ಥಿಗಳಿಗಾಗಿ ಪಾದರಕ್ಷೆ ವಿತರಣೆ (5,000 ಕ್ಕಿಂತ ಹೆಚ್ಚು ಜೋಡಿಗಳನ್ನು ನೀಡಲಾಗಿದೆ); ಸುರಕ್ಷಿತ ಕುಡಿಯುವ ನೀರಿನ ಘಟಕ ಅಳವಡಿಕೆ (ಗ್ರಾಮೀಣ ಶಾಲೆಗಳು ಮತ್ತು ಸಂಸ್ಥೆಗಳಲ್ಲಿ 13 ಘಟಕಗಳನ್ನು ಸ್ಥಾಪಿಸಲಾಗಿದೆ); ಮನೆಯಿಲ್ಲದವರಿಗಾಗಿ ಮನೆ ನಿರ್ಮಾಣ (5 ಮನೆಗಳು ಪ್ರಾಯೋಜಿತ); ರಕ್ತ, ಅಂಗ ಮತ್ತು ದೇಹದಾನ ಹಾಗೂ ವಾರ್ಷಿಕ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮ.

2016 ರಲ್ಲಿ, ಅಸೋಸಿಯೇಷನ್ ನ ಶತಮಾನೋತ್ಸವ ಸಂದರ್ಭದಲ್ಲಿ ದತ್ತಿ ಚಟುವಟಿಕೆಗಳನ್ನು ಬೆಂಬಲಿಸಲು ಟ್ರಸ್ಟ್ ಅನ್ನು ಸ್ವತಂತ್ರ ಘಟಕವಾಗಿ ಸ್ಥಾಪಿಸಲಾಯಿತು.

ವಾರ್ಷಿಕ ಸ್ಕಾಲರ್‌ಶಿಪ್‌ಗಳು 2023

CASK ಮೂರು ವಿಭಾಗಗಳ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ (1) ದತ್ತಿ ನಿಧಿಗಳು
(2) ‘ಕೋವಿಡ್ ಬೆಂಬಲ’ ನಿಧಿ: ಕೋವಿಡ್ ಸಮಯದಲ್ಲಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗಾಗಿ (3) ನಿಯಮಿತ ವಾರ್ಷಿಕ ವಿದ್ಯಾರ್ಥಿವೇತನಗಳು

ಮೆರಿಟ್ ಅಥವಾ ಅಂಕಗಳಿಕೆಯ ಆಧಾರದಲ್ಲಿ ವಿದ್ಯಾರ್ಥಿವೇತನವನ್ನು ನೀಡದೆ, ವಿದ್ಯಾರ್ಥಿಯ
ಆರ್ಥಿಕ ದುಃಸ್ಥಿತಿ ಮತ್ತು ಕುಟುಂಬದ ವಿಷಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು (ತಂದೆ/ತಾಯಿ ಮೃತರು, ಒಂಟಿ ಪೋಷಕ, ದಿನಗೂಲಿ, ಗೃಹಿಣಿ, ಕಾರ್ಮಿಕರು, ಪ್ರಮುಖ ರೋಗಗಳಿಂದ ಬಳಲುತ್ತಿರುವ ಪೋಷಕರು) ಮಾನದಂಡವಾಗಿಟ್ಟುಕೊಂಡು, ಜಾತಿ, ಮತ ಅಥವಾ ಧರ್ಮವನ್ನು ಲೆಕ್ಕಿಸದೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.

ಸಂಸ್ಥೆಯ ಪೋಷಕ ರೆ. ಪೀಟರ್ ಪೌಲ್ ಸಲ್ಡಾನ್ಹಾ ಪರವಾಗಿ, ಜುಲೈ 8 ಶನಿವಾರದಂದು ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಡಾ ಮಾನ್ಸಿಂಜರ್ ಮ್ಯಾಕ್ಸಿಂ ನೊರೊನ್ಹಾ ವಿದ್ಯಾರ್ಥಿವೇತನವನ್ನು ವಿತರಿಸಿದರು. ಬಿಷಪ್ ಹೌಸ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ದಾನಿಗಳು, ಸದಸ್ಯರು ಮತ್ತು ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು.

ಈ ವರ್ಷ 250 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಒಟ್ಟು 154 ವಿದ್ಯಾರ್ಥಿಗಳಿಗೆ ಸುಮಾರು 16,09,000 ರೂ. ವಿದ್ಯಾರ್ಥಿವೇತನವನ್ನು ನೀಡಲಾಯಿತು.

60 ಶಾಲಾ ವಿದ್ಯಾರ್ಥಿಗಳು, 30 ಪಿಯುಸಿ ವಿದ್ಯಾರ್ಥಿಗಳು, 39 ಪದವಿ ವಿದ್ಯಾರ್ಥಿಗಳು, 5 ನರ್ಸಿಂಗ್ ವಿದ್ಯಾರ್ಥಿಗಳು, 6 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು 14 ಇತರ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಲಭ್ಯವಿರುವ ಸಂಪನ್ಮೂಲಗಳೊಂದಿಗೆ CASK ಸಮುದಾಯದ ಅಗತ್ಯಗಳನ್ನು ಪರಿಣಾಮಕಾರಿ ರೀತಿಯಲ್ಲಿ ಪೂರೈಸುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಕ್ಯಾಪ್ಟನ್ ವಿನ್ಸೆಂಟ್ ಪೈಸ್ ತಿಳಿಸಿದ್ದಾರೆ.