ಕಾರ್ಕಳ: ಅಜೆಕಾರ್ ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ: ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳಿಗೆ ನಡೆದ ವಿದ್ಯಾರ್ಥಿವೇತನ ಅರ್ಹತಾ ಪರೀಕ್ಷೆಯಲ್ಲಿ ಒಟ್ಟು ದಾಖಲಾತಿಯ ಶೇ10 ರಷ್ಟು ವಿದ್ಯಾರ್ಥಿಗಳಿಗೆ 2023-24 ನೇ ಸಾಲಿನ ಪ್ರಥಮ ಪಿಯುಸಿ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ನೀಡಲಾಯಿತು. ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿಗೆ ದಾಖಲಾದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಅರ್ಹತಾ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗಿತ್ತು.

ಇದೇ ಸಂದರ್ಭದಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಓದಿ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ತಾಲೂಕಿನ ವಿವಿಧ ಪ್ರೌಢಶಾಲೆಗಳ ಎಸ್.ಎಸ್.ಎಲ್.ಸಿ ತರಗತಿಗಳಲ್ಲಿ ಮೊದಲ ಸ್ಥಾನವನ್ನು ಪಡೆದು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳಿಗೂ ಕೂಡಾ ವಿದ್ಯಾರ್ಥಿ ವೇತನವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನೀಡಲಾಯಿತು. ಒಟ್ಟು 36.5 ಲಕ್ಷ ರೂ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಕಳ ಜ್ಞಾನಸುಧಾ ಕ್ಯಾಂಪಸ್‌ನ ಸಿಇಒ ಹಾಗೂ ಪಿಯು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರ್, ಉಪಪ್ರಾಂಶುಪಾಲ ಸಾಹಿತ್ಯ, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಡೀನ್ ಅಕಾಡೆಮಿಕ್ಸ್ ಮಿಥುನ್ ಯು, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಂಯೋಜನಾಧಿಕಾರಿ ಸಂದೀಪ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶಕುಂತಲಾ.ಎಂ.ಸುವರ್ಣ, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ಉಷಾ ರಾವ್ ಯು, ಉಪಪ್ರಾಂಶುಪಾಲೆ ವಾಣಿ .ಕೆ. ಮುಖ್ಯ ನಿಲಯ ಪಾಲಕರಾದ ಮಂಜುನಾಥ್ ಮುದ್ರಾಡಿ ಮತ್ತು ಸೌಜನ್ಯ ಹೆಗ್ಡೆ ಉಪಸ್ಥಿತರಿದ್ದರು.