ವಂಚನೆಯ ಬಗ್ಗೆ ತನ್ನ ಗ್ರಾಹರಿಕೆ ಎಚ್ಚರಿಕೆ ನೀಡಿದ ಎಸ್.ಬಿ.ಐ: ಈ ದೂರವಾಣಿ ಸಂಖ್ಯೆಗಳಿಂದ ದೂರವಿರಿ ಎಂದ ಬ್ಯಾಂಕ್

 

ನವದೆಹಲಿ: ದೇಶದಾದ್ಯಂತ ಹರಡುತ್ತಿರುವ ಫಿಶಿಂಗ್ ವಂಚನೆಯ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ತನ್ನ ಗ್ರಾಹಕರಿಗೆ ಟ್ವೀಟ್‌ಗಳು, ಎಸ್.ಎಮ್.ಎಸ್ ಗಳು ಮತ್ತು ಇಮೇಲ್‌ಗಳು ಸೇರಿದಂತೆ ವಿವಿಧ ಮೂಲಗಳ ಮೂಲಕ ಹಣವನ್ನು ವಂಚಿಸಲು ಬ್ಯಾಂಕ್‌ನ ಹೆಸರನ್ನು ಬಳಸುವ ಎಸ್.ಬಿ.ಐ ಫಿಶಿಂಗ್ ಹಗರಣದ ಬಗ್ಗೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

ವಂಚನೆಗಳಿಂದ ಸುರಕ್ಷಿತವಾಗಿರಲು, ಎಸ್‌ಬಿಐ ತನ್ನ ಗ್ರಾಹಕರಿಗೆ +91-8294710946 ಅಥವಾ +91-7362951973 ಕರೆಗಳನ್ನು ಸ್ವೀಕರಿಸದಂತೆ ಕೇಳಿಕೊಂಡಿದೆ. ಈ ದೂರವಾಣಿ ಸಂಖ್ಯೆಗಳಿಂದ ಬರುವ ಕರೆಗಳು ಸ್ಕ್ಯಾಮರ್ ಗಳದ್ದಾಗಿರಬಹುದು ಮತ್ತು ಈ ಕರೆಗಳನ್ನು ಸ್ವೀಕರಿಸುವುದು ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಕಳೆದುಕೊಳ್ಳಲು ದಾರಿ ಮಾಡಿಕೊಡಬಹುದು ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಈ ದೂರವಾಣಿ ಸಂಖ್ಯೆಗಳಿಂದ ಬರುವ ಯಾವುದೇ ಕೆವೈಸಿ ಅಪ್ ಡೇಟ್ ಲಿಂಕ್ ಗಳನ್ನು ತೆರೆಯಬಾರದು, ಈ ರೀತಿ ಮಾಡುವುದರಿಂದ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಕಳೆದುಕೊಳ್ಳಬಹುದು ಎಂದು ಬ್ಯಾಂಕ್ ತಿಳಿಸಿದೆ.

ಈ ದೂರವಾಣಿ ಸಂಖ್ಯೆಗಳಿಂದ ಬರುವ ಕರೆಗಳನ್ನು ಸ್ವೀಕರಿಸಬಾರದು, ಯಾವುದೇ ವೈಯಕ್ತಿಕ ಮಾಹಿತಿಯನ್ನು ಕರೆ ಮಾಡುವವರ ಜೊತೆ ಹಂಚಿಕೊಳ್ಳಬಾರದು. ಇಂತಹ ಕರೆಗಳ ವಿರುದ್ದ ಕ್ರಮ ತೆಗೆದುಕೊಳ್ಳಲು, phishing@sbi.co.in ಗೆ ಇಮೇಲ್ ಕಳುಹಿಸಬಹುದು ಅಥವಾ 1930 ರಲ್ಲಿ ಹಾಟ್‌ಲೈನ್‌ಗೆ ಕರೆ ಮಾಡಬಹುದು ಅಥವಾ ಹತ್ತಿರದ ಪೋಲೀಸು ಠಾಣೆಗೆ ದೂರು ಕೊಡಬಹುದು ಎಂದು ಎಸ್.ಬಿ.ಐ ತಿಳಿಸಿದೆ.