ಭಾರವಾದ ಕಬ್ಬಿಣದ ಗ್ಯಾಸ್ ಸಿಲಿಂಡರ್‌ಗೆ ಗುಡ್‌ಬೈ ಹೇಳೋ ಕಾಲ ಬಂತು, ಮಾರುಕಟ್ಟೆಗೆ ಬಂದಿದೆ ಹಗುರ, ಪಾರದರ್ಶಕ LPG ಸಿಲಿಂಡರ್

‘ಭಾರತ್ ಗ್ಯಾಸ್ ಲೈಟ್‌ಜಿಪ್’ ಹಾಗೂ ‘HP ನವ್ಯ’ ಹೆಸರಿನಲ್ಲಿ ಬಿಡುಗಡೆಯಾಗಿರುವ ಈ ಹೊಸ ಸಿಲಿಂಡರ್‌ಗಳು ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳಿಗಿಂತ ಹಗುರ, ಸುರಕ್ಷಿತ ಮತ್ತು ಬಳಕೆದಾರ ಸ್ನೇಹಿಯಾಗಿವೆ.

50% ಕಡಿಮೆ ತೂಕ

ಹೊಸ ಕಾಂಪೋಸಿಟ್ ಸಿಲಿಂಡರ್‌ಗಳು ಸಾಮಾನ್ಯ ಕಬ್ಬಿಣದ ಸಿಲಿಂಡರ್‌ಗಳಿಗಿಂತ ಸುಮಾರು ಶೇ.50ರಷ್ಟು ಹಗುರವಾಗಿವೆ. ಇದರಿಂದ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಇತರ ಬಳಕೆದಾರರು ಸುಲಭವಾಗಿ ಎತ್ತಿ ಸಾಗಿಸಬಹುದು.

ಸಾಮಾನ್ಯ ಗೃಹ ಬಳಕೆಯ LPG ಸಿಲಿಂಡರ್‌ನಲ್ಲಿ 14.2 ಕೆ.ಜಿ. ಅನಿಲವಿದ್ದರೆ, ಹೊಸ ಮಾದರಿಯ ಸಿಲಿಂಡರ್‌ಗಳು 10 ಕೆ.ಜಿ. ಮತ್ತು 5 ಕೆ.ಜಿ. ಸಾಮರ್ಥ್ಯದಲ್ಲಿ ಲಭ್ಯವಿದ್ದು, ಕಡಿಮೆ ತೂಕ ಮತ್ತು ಉತ್ತಮ ಹಿಡಿಕೆಯ ವಿನ್ಯಾಸದಿಂದ ಸಾಗಿಸಲು ಅನುಕೂಲಕರವಾಗಿವೆ.

ಕಾಂಪೋಸಿಟ್ ಸಿಲಿಂಡರ್ ಎಂದರೇನು?

ಸಾಂಪ್ರದಾಯಿಕ ಸಿಲಿಂಡರ್‌ಗಳು ಕಬ್ಬಿಣದಿಂದ ತಯಾರಾಗಿದ್ದರೆ, ಹೊಸ ಕಾಂಪೋಸಿಟ್ ಸಿಲಿಂಡರ್‌ಗಳು ಫೈಬರ್‌ಗ್ಲಾಸ್ ಹಾಗೂ ಉನ್ನತ ಗುಣಮಟ್ಟದ ಪಾಲಿಮರ್‌ಗಳಿಂದ ನಿರ್ಮಿತ ಮೂರು ಪದರಗಳ ರಚನೆ ಹೊಂದಿವೆ.

ಇವುಗಳಿಗೆ ತುಕ್ಕು ಹಿಡಿಯುವುದಿಲ್ಲ. ನೆಲದ ಮೇಲೆ ತುಕ್ಕಿನ ಕಲೆಗಳು ಮೂಡುವ ಸಮಸ್ಯೆಯೂ ಇರುವುದಿಲ್ಲ. ಜೊತೆಗೆ ಆಧುನಿಕ ವಿನ್ಯಾಸ ಹೊಂದಿರುವುದರಿಂದ ಮಾಡ್ಯುಲರ್ ಅಡುಗೆಮನೆಗಳಿಗೆ ಹೊಂದಿಕೆಯಾಗುತ್ತವೆ.

ಉಳಿದಿರುವ ಗ್ಯಾಸ್ ಪ್ರಮಾಣ ಕಣ್ಣಿಗೆ ಕಾಣುತ್ತದೆ

ಈ ಹೊಸ ಸಿಲಿಂಡರ್‌ನ ಪ್ರಮುಖ ವೈಶಿಷ್ಟ್ಯವೆಂದರೆ, ಸಿಲಿಂಡರ್ ಒಳಗೆ ಉಳಿದಿರುವ ಅನಿಲದ ಪ್ರಮಾಣವನ್ನು ಹೊರಗಿನಿಂದಲೇ ನೋಡಬಹುದು. ಸಿಲಿಂಡರ್‌ನ ಮಧ್ಯಭಾಗ ಅರೆಪಾರದರ್ಶಕವಾಗಿರುವುದರಿಂದ ಅನಿಲದ ಮಟ್ಟವನ್ನು ಸುಲಭವಾಗಿ ಗುರುತಿಸಬಹುದು.

ಇದರಿಂದ ಅನಿಲ ಯಾವಾಗ ಮುಗಿಯಬಹುದು ಎಂಬುದನ್ನು ಮುಂಚಿತವಾಗಿಯೇ ತಿಳಿದು, ಸಮಯಕ್ಕೆ ಸರಿಯಾಗಿ ಹೊಸ ಸಿಲಿಂಡರ್ ಬುಕ್ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಸುರಕ್ಷತೆಯಲ್ಲೂ ಮುಂಚೂಣಿ

ಕಾಂಪೋಸಿಟ್ LPG ಸಿಲಿಂಡರ್‌ಗಳು ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳಿಗಿಂತ ಹೆಚ್ಚು ಸುರಕ್ಷಿತವೆಂದು ಕಂಪನಿಗಳು ತಿಳಿಸಿವೆ. ಫೈಬರ್‌ಗ್ಲಾಸ್ ರಚನೆಯಿಂದಾಗಿ ತುಕ್ಕು ಹಿಡಿಯುವ ಸಮಸ್ಯೆ ಇರುವುದಿಲ್ಲ. ಜೊತೆಗೆ ಅನಿಲ ಸೋರಿಕೆಯ ಸಾಧ್ಯತೆಯೂ ಕಡಿಮೆಯಾಗಿದ್ದು, ಹೆಚ್ಚಿನ ಸುರಕ್ಷತಾ ಮಾನದಂಡಗಳನ್ನು ಪಾಲಿಸಿ ಇವುಗಳನ್ನು ತಯಾರಿಸಲಾಗಿದೆ.

ಹಗುರ ತೂಕ, ಆಧುನಿಕ ವಿನ್ಯಾಸ, ಪಾರದರ್ಶಕ ಅನಿಲ ಮಟ್ಟದ ಸೂಚನೆ ಹಾಗೂ ಉತ್ತಮ ಸುರಕ್ಷತಾ ವೈಶಿಷ್ಟ್ಯಗಳಿಂದ ಈ ಹೊಸ ಕಾಂಪೋಸಿಟ್ LPG ಸಿಲಿಂಡರ್‌ಗಳು ಗ್ರಾಹಕರ ಗಮನ ಸೆಳೆಯುತ್ತಿವೆ.