ಸ್ಯಾಕ್ಸೋಫೋನ್ ಗಾರುಡಿಗನಿಗೆ ಶ್ರದ್ಧಾಂಜಲಿ;  ಕದ್ರಿ ಗೋಪಾಲ್ ನಾಥ್ ನೈಜ ನಾದಯೋಗಿ: ಪ್ರೊ.ಅರವಿಂದ ಹೆಬ್ಬಾರ್

ಉಡುಪಿ: ಅಪೂರ್ವವಾದ ಕಲಾತಪಸ್ಸು, ಪ್ರಯೋಗಶೀಲತೆಗಳಿಂದ ಸ್ಯಾಕ್ಸೋಫೋನ್ ನಂಥಹ ಪಾಶ್ಚಾತ್ಯ ವಾದ್ಯಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಳವಡಿಸಿ ಬಾಲಮುರಳೀಕೃಷ್ಣರಂಥಹ ನೂರಾರು ಮಹಾನ್ ಕಲಾವಿದರುಗಳನ್ನೇ ಬೆರಗುಗೊಳಿಸಿದ್ದು, ಮಾತ್ರವಲ್ಲದೇ ಜಾಗತಿಕವಾಗಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಕದ್ರಿ ಗೋಪಾಲನಾಥರು ನೈಜ ನಾದಯೋಗಿ ಎಂದು ಹಿರಿಯ ಸಂಗೀತಜ್ಞ ಪ್ರೊ. ಅರವಿಂದ ಹೆಬ್ಬಾರ್ ಹೇಳಿದರು.

ರಾಗಧನ ಉಡುಪಿ ಇದರ ವತಿಯಿಂದ ನಡೆದ ವಿದ್ವಾನ್ ಕದ್ರಿ ಗೋಪಾಲ್ ನಾಥ್ ನುಡಿನಮನ ಕಾರ್ಯಕ್ರಮದಲ್ಲಿ ಪ್ರೊ. ಹೆಬ್ಬಾರ್ ಕದ್ರಿಯವರ ಕಲಾ ಬದುಕು ಹಾಗೂ ಸಿದ್ಧಿ ಸಾಧನೆಯ ಬಗೆಗೆ ಮಾತನಾಡಿ ನುಡಿನಮನ ಅರ್ಪಿಸಿದರು.

ಬಿಬಿಸಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ ಬಳಿಕ ಕಲಾಕ್ಷೇತ್ರದಲ್ಲಿ ವಿಶ್ವದಲ್ಲೇ ವಿಶಿಷ್ಟರಾಗಿ ಛಾಪು ಮೂಡಿಸಿದ ಕದ್ರಿಯವರು ವರ್ಣರಂಜಿತ ಉತ್ಸಾಹಿ ಹಾಗೂ ಮಾನವೀಯ ವ್ಯಕ್ತಿತ್ವದ ಮೂಲಕವೂ ಅನನ್ಯತೆಯನ್ನು ಸಾಧಿಸಿದ ಅಪೂರ್ವ ಕಲಾವಿದ ಎಂದರು.

ಕಲಾಚಿಂತಕಿ ವಿದುಷಿ ಪ್ರತಿಭಾ ಸಾಮಗ, ಸರೋಜಾ ಆಚಾರ್ಯ, ರಾಘವೇಂದ್ರ ಆಚಾರ್ಯ, ವಸಂತಲಕ್ಷ್ಮೀ ಹೆಬ್ಬಾರ್ , ವಾಸುದೇವ ಭಟ್ ಪೆರಂಪಳ್ಳಿ,  ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಮೊದಲಾದವರು ಕದ್ರಿಯವರ ಅಪಾರ ಸಂಗೀತ ಸಾಧನೆ ಹಾಗೂ ಸಜ್ಜನಿಕೆ ಸಹಕಲಾವಿದರು ಹಾಗೂ ಅಭಿಮಾನಿಗಳ ಬಗೆಗೆ ಅವರಿಗಿದ್ದ ಆದರ ಆತ್ಮೀಯತೆಗಳು ಹಾಗೂ ಕದ್ರಿಯವರಿಂದಾಗಿಯೇ ಕರಾವಳಿ ಜಿಲ್ಲೆಗಳೂ ಸೇರಿದಂತೆ ನಾಡಿನಲ್ಲಿ ನೂರಾರು ಮಂದಿ ಸ್ಯಾಕ್ಸೋಫೋನ್ ನಿಂದಲೇ ಬದುಕು ಕಂಡುಕೊಳ್ಳುವಂತಾದ ಬಗ್ಗೆ ಬಣ್ಣಿಸಿ ನುಡಿನಮನ ಅರ್ಪಿಸಿದರು.

ರಾಗಧನ ಸಂಸ್ಥೆಯ ಅಧ್ಯಕ್ಷ ಡಾ. ಶ್ರೀಕಿರಣ್ ಹೆಬ್ಬಾರ್ ಪ್ರಸ್ತಾವಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಉಮಾ ಉದಯ್ ಶಂಕರ್ , ಶಂಕರನಾರಾಯಣ್ ಕಾರ್ಯಕ್ರಮ ಸಂಯೋಜಿಸಿದರು.